ರಾಜಸ್ಥಾನ ರಾಜ್ಯದ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಶೂಟರ್‌ಗಳು ಮತ್ತು ಒಬ್ಬ ಸಹಚರನನ್ನು ದೆಹಲಿ ಕ್ರೈಂ ಬ್ರಾಂಚ್ ಮತ್ತು ರಾಜಸ್ಥಾನ ಪೊಲೀಸರು ತಡರಾತ್ರಿ ಜಂಟಿ ಕಾರ್ಯಾಚರಣೆಯಲ್ಲಿ ಚಂಡೀಗಢದಲ್ಲಿ ಬಂಧಿಸಿದ್ದಾರೆ.
ಇಬ್ಬರು ಶೂಟರ್‌ಗಳಾದ ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಮತ್ತು ಉಧಮ್ ಎಂಬ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ, ಗೊಗಮೆಡಿ ಹತ್ಯೆಯಲ್ಲಿ ಉಧಮ್ ಪಾತ್ರವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದೆಹಲಿ ಪೊಲೀಸರು ರೋಹಿತ್ ಮತ್ತು ಉಧಮ್ ಅವರನ್ನು ಬಂಧಿಸಿ ದೆಹಲಿಗೆ ಕರೆತಂದಿದ್ದಾರೆ. ನಿತಿನ್ ಫೌಜಿ ರಾಜಸ್ಥಾನ ಪೊಲೀಸರ ವಶದಲ್ಲಿ ಉಳಿದಿದ್ದಾನೆ. ಈ ಹಿಂದೆ, ಈ ಮೂವರ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.
ಪೊಲೀಸರ ಪ್ರಕಾರ, ಕೊಲೆಯ ನಂತರ ಆರೋಪಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದಿಂದ ಹರಿಯಾಣದ ಹಿಸಾರ್ ತಲುಪಿದ್ದಾರೆ. ನಂತರ ಹಿಮಾಚಲ ಪ್ರದೇಶದ ಮನಾಲಿಗೆ ಹೋದರು. ನಂತರ, ಅವರು ಚಂಡೀಗಢಕ್ಕೆ ತೆರಳಿದ್ದಾಗ ಅಲ್ಲಿ ಬಂಧಿಸಲಾಯಿತು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ
ಆರೋಪಿಗಳ ಮೊಬೈಲ್ ಫೋನ್ ಸ್ಥಳಗಳನ್ನು ಅನುಸರಿಸಿ ಪೊಲೀಸರು ಶೂಟರ್‌ಗಳನ್ನು ಪತ್ತೆಹಚ್ಚಿದ್ದಾರೆ ಎಂದು ರಾಜಸ್ಥಾನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿರುವ ದಿನೇಶ್ ಎಂ ಎನ್ ಅವರು ತಡರಾತ್ರಿಯ ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹತ್ಯೆಯ ಆರೋಪಿಗಳ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ, ಹೆಚ್ಚುವರಿ ಮಹಾನಿರ್ದೇಶಕ (ಅಪರಾಧ) ದಿನೇಶ್ ಎಂಎನ್ ಅವರು ಈ ಮೊದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
“ಆರೋಪಿಗಳ ವಿಚಾರಣೆ ಈಗಾಗಲೇ ಪ್ರಾರಂಭವಾಗಿದೆ. ನಾಳೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಎಡಿಜಿ ದಿನೇಶ್ ತಿಳಿಸಿದ್ದಾರೆ.





