ತಮಿಳುನಾಡಿನ ಕರೂರು ದೇವಾಲಯದ ಭೂ ಕಬಳಿಕೆ ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ‘ದೇವರಿಗೆ ಮತದಾನದ ಹಕ್ಕು ಇಲ್ಲದ ಕಾರಣ, ದೇವರು ಪರಿಹಾರ ಪಡೆಯಲಾಗಿಲ್ಲ’ ಎಂದು ಆಡಳಿತ/ಅಧಿಕಾರಿಗಳನ್ನು ಟೀಕಿಸಿದೆ.
ಕರೂರಿನ ವೆನ್ನೈಮಲೈನಲ್ಲಿರುವ ಬಾಲಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ಸೇರಿದ ಸುಮಾರು 500 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸಿದ್ದಾರೆ. ಆ ಭೂಮಿಯನ್ನು ಅತಿಕ್ರಮಣದಾರರಿಂದ ತೆರವುಗೊಳಿಸಬೇಕು ಎಂದು 2019ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಆದೇಶವನ್ನು ಜಾರಿಗೊಳಿಸುವಲ್ಲಿ ತೀವ್ರ ವಿಳವಾಗಿರುವುದನ್ನು ಪ್ರಶ್ನಿಸಿ ದೇವಾಲಯದ ಆಡಳಿತವು ‘ನ್ಯಾಯಾಂಗ ನಿಂದನೆ ಅರ್ಜಿ’ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿಗಳಾದ ಪಿ ವೇಲ್ಮುರುಗನ್ ಮತ್ತು ಬಿ ಪುಗಲೇಂಧಿ, ದೇವಾಲಯಕ್ಕೆ ಸೇರಿದ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ದೇವಾಲಯಕ್ಕೆ ಹಿಂದಿರಿಸುವಂತೆ ಸಿವಿಲ್ ನ್ಯಾಯಾಲಯಗಳು, ಮಾನವ ಸಂಪನ್ಮೂಲ ಹಾಗೂ ನೋಂದಣಿ ಇಲಾಖೆಗಳಿಗೆ ನಿರ್ದೇಶನಗಳನ್ನು ನೀಡಿದೆ.
ವಿಚಾರಣೆ ವೇಳೆ, ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವವರಲ್ಲಿ 27 ಮಂದಿ ಸರ್ಕಾರಿ ಅಧಿಕಾರಿಗಳು, 49 ಮಂದಿ ಕೈಗಾರಿಕೋದ್ಯಮಿಗಳು ಹಾಗೂ 38 ಮಂದಿ ಗಣನೀಯ ಪ್ರಭಾವ ಹೊಂದಿರುವ ವ್ಯಕ್ತಿಗಳು ಎಂಬುದನ್ನು ಕೋರ್ಟ್ ಗಮನಿಸಿದೆ. ಅಲ್ಲದೆ, ಪಕ್ಷಾತೀತವಾಗಿ ರಾಜಕೀಯ ನಾಯಕರು ಬೃಹತ್ ಪ್ರತಿಭಟನೆಗಳನ್ನು ನಡೆಸುವ ಮೂಲಕ ತೆರವು ಪ್ರಕ್ರಿಯೆಯನ್ನು ತಡೆದಿದ್ದಾರೆ ಎಂಬುದನ್ನೂ ಗಮನಿಸಿದೆ.
ಈ ಲೇಖನ ಓದಿದ್ದೀರಾ?: ಯಾವ ಅಬಕಾರಿ ನೀತಿಗಾಗಿ ಕೇಜ್ರೀವಾಲರನ್ನು ಜೈಲಿಗೆ ತಳ್ಳಿತೋ, ಅದೇ ನೀತಿಯನ್ನು ಮುಂದುವರೆಸಿದೆ ಬಿಜೆಪಿ ಸರ್ಕಾರ!
“ಬಡ ದೇವತೆಗಳಿಗೆ ಮತದಾನದ ಹಕ್ಕಿಲ್ಲ. ಆದರೆ, ಪ್ರಬಲ ಅತಿಕ್ರಮಣಕಾರರಿಗೆ ಅಮೂಲ್ಯವಾದ ಮತಗಳಿವೆ. ಪ್ರಜಾಪ್ರಭುತ್ವ ರಾಜಕೀಯದಲ್ಲಿ, ಚುನಾವಣಾ ಲೆಕ್ಕಚಾರವು ಕೆಲವೊಮ್ಮೆ ಆಡಳಿತಾತ್ಮಕ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಸಾಂವಿಧಾನಿಕ ಆಡಳಿತವು ಚುನಾವಣಾ ಅನುಕೂಲಕ್ಕೆ ಅಧೀನವಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ದೇವಾಲಯದ ಆಸ್ತಿಗಳಿಗೆ ಸಂಬಂಧಿಸಿದ ಮೊಕದ್ದಮೆಗಳನ್ನು ನಿರ್ವಹಿಸುತ್ತಿರುವ ಸಿವಿಲ್ ನ್ಯಾಯಾಲಯಗಳು, ಆರು ತಿಂಗಳೊಳಗೆ ಮೊಕದ್ದಮೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು” ಎಂದು ಸೂಚಿಸಿದೆ.
ಕೆಲವು ಸಂಘಟನೆಗಳು ತೆರವು ಕ್ರಮಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು, ಆ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಕ್ರಮ ಕೈಗೊಳ್ಳಲು ಸೂಚಿಸಿದೆ.




