ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಕನಿಷ್ಠ 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಪಟ್ಟಣದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ ಎಂದು ವರದಿಯಾಗಿದೆ.
ನಗರದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ‘ಕಾಸರಗೋಡು ಫ್ಲೀ ಯುವಜನ’ ಸಂಘಟನೆಯು ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಹನಾನ್ ಷಾ ಅವರ ಗಾಯನ ಇದ್ದಿದ್ದರಿಂದ, ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಪರಿಣಾಮ, ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಹಲವರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದುಬಂದಿದೆ
ಕಾರ್ಯಕ್ರಮದಲ್ಲಿ ಭಾಗಿಯಾಗಲು ಟಿಕೆಟ್ ವ್ಯವಸ್ಥೆ ಇತ್ತು. ಆದಾಗ್ಯೂ, ಟಿಕೆಟ್ ಪಡೆಯದವರೂ ಕಾರ್ಯಕ್ರಮಕ್ಕೆ ಬಂದಿದ್ದರು. ಟಿಕೆಟ್ ಇಲ್ಲದವರೂ ಮೈದಾನಕ್ಕೆ ನುಗ್ಗಲು ಯತ್ನಿಸಿದ್ದಾರೆ. ನೂಕುನುಗ್ಗಲಿನಲ್ಲಿ ಹಲವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಜನರ ಗುಂಪನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಕ್ರಮವೂ ಕೆಲಕಾಲ ಅಸ್ತವ್ಯಸ್ತಗೊಂಡು, ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ.




