ಚುನಾವಣಾ ಆಯೋಗವು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಮಾರ್ಚ್ 15ರಂದು ಚುನಾವಣಾ ಆಯೋಗ ಘೋಷಿಸಿದೆ. ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ, ಆದರೆ ಮೇ 4ರಂದು ಮತಎಣಿಕೆ ನಡೆಯಲಿದೆ. ಅಂದರೆ ಮತದಾನ ಮಾಡಿ ಫಲಿತಾಂಶಕ್ಕಾಗಿ ಬರೋಬ್ಬರಿ 25 ದಿನಗಳು ಕಾಯಬೇಕಾಗಿದೆ!
ಫಲಿತಾಂಶಕ್ಕಾಗಿ ಅಷ್ಟೊಂದು ದಿನ ಕಾಯಬೇಕಾಗಿರುವುದು ಸದ್ಯ ತೀವ್ರ ಚರ್ಚೆಗೆ ಕಾರಣವಾಗಿದೆ. ಮತದಾರರು ಮತ್ತು ರಾಜಕೀಯ ಪಕ್ಷಗಳಲ್ಲಿ ಹಲವು ಅನುಮಾನ ಮತ್ತು ಆತಂಕಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಮತದಾನ ಮುಗಿದ 3ರಿಂದ 5 ದಿನಗಳಲ್ಲಿ ಫಲಿತಾಂಶ ಹೊರಬರುವುದು ವಾಡಿಕೆ. ಆದರೆ ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತಯಂತ್ರಗಳು (EVM) ಸ್ಟ್ರಾಂಗ್ ರೂಮ್‌ಗಳಲ್ಲಿ ಸುಮಾರು ಮೂರು ವಾರಗಳಿಗಿಂತ ಹೆಚ್ಚು ಕಾಲ ಇರಲಿರುವುದು ಸುರಕ್ಷತೆಯ ಆತಂಕವನ್ನು ಸೃಷ್ಟಿಸಿದೆ.
ಇದನ್ನು ಓದಿದ್ದೀರಾ? BREAKING NEWS | ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ದಿನಾಂಕ ಘೋಷಣೆ
‘ಮತದಾನದ ವಂಚನೆ’ ನಡೆಯಬಹುದು ಎಂಬುದು ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಲ್ಲಿ ಪ್ರಮುಖವಾಗಿ ಕಾಡುತ್ತಿರುವ ಭಯ. ಅಷ್ಟು ಮಾತ್ರವಲ್ಲದೆ 25 ದಿನಗಳ ಕಾಲ ಮತಯಂತ್ರಗಳನ್ನು ಭದ್ರವಾಗಿಡುವುದು ಸವಾಲಿನ ಕೆಲಸ. ಇಷ್ಟೊಂದು ದಿನಗಳ ಕಾಲ ಕಾವಲಿನ ವೇಳೆ ಸ್ವಲ್ಪ ಗಮನ ತಪ್ಪಿದರೂ ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್‌ಗಳಿಗೆ ಅನಧಿಕೃತ ಪ್ರವೇಶ ಅಥವಾ ಯಂತ್ರಗಳ ಅದಲು-ಬದಲು ನಡೆಯಬಹುದು ಎಂಬ ಶಂಕೆಯೂ ಇದೆ. ಅಷ್ಟಕ್ಕೂ EVM ಹ್ಯಾಕಿಂಗ್ ಮಾಡಲು ಇಷ್ಟೊಂದು ದಿನಗಳು ಸಾಕಲ್ಲವೇ?
ಇಷ್ಟು ದೀರ್ಘ ಅವಧಿಯಲ್ಲಿ ಸ್ಟ್ರಾಂಗ್ ರೂಮ್‌ಗಳ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತವೆಯೇ? ವಿದ್ಯುತ್ ವ್ಯತ್ಯಯದ ನೆಪದಲ್ಲಿ ಏನಾದರೂ ಅಕ್ರಮ ನಡೆಯಬಹುದೇ? ಎಂಬ ಪ್ರಶ್ನೆಗಳೂ ಎದ್ದಿವೆ. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಚುನಾವಣೆ ಹಲವು ಹಂತಗಳಲ್ಲಿ ನಡೆಯುವುದರಿಂದ, ಎಲ್ಲಾ ಹಂತಗಳ ಮತ ಎಣಿಕೆಯನ್ನು ಒಂದೇ ದಿನ ಇರಿಸಲಾಗಿದೆ. ಆದರೆ, ಕೇರಳದಲ್ಲಿ ಏಪ್ರಿಲ್ 9ಕ್ಕೆ ಮತದಾನ ಮುಗಿಯುವುದರಿಂದ, ಇಷ್ಟು ದಿನಗಳ ಕಾಲ ಕಾಯುವುದು ಅನಗತ್ಯ ಎಂಬುದು ವಿಪಕ್ಷಗಳ ವಾದ. ಅಷ್ಟು ಮಾತ್ರವಲ್ಲದೆ ಮತಯಂತ್ರಗಳನ್ನು ಕಾಯಲು ಸಾವಿರಾರು ಭದ್ರತಾ ಸಿಬ್ಬಂದಿಯನ್ನು ತಿಂಗಳ ಕಾಲ ಬಳಸಿಕೊಳ್ಳುವುದು ಆಡಳಿತಾತ್ಮಕವಾಗಿ ಹೊರೆಯಲ್ಲವೇ?
ಇನ್ನು ಕೇರಳದಲ್ಲಿ 2021ರ ಚುನಾವಣೆಯಲ್ಲೂ ಇದೇ ರೀತಿಯ ಸುದೀರ್ಘ ಅಂತರವಿತ್ತು. ಆಗಲೂ ಕೇರಳದಲ್ಲಿ ಏಪ್ರಿಲ್ 6ಕ್ಕೆ ಮತದಾನ ಮುಗಿದು ಮೇ 2ರಂದು ಫಲಿತಾಂಶ ಬಂದಿತ್ತು. ಈ ವಿಳಂಬವು “ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ” ಎಂದು ವಿಪಕ್ಷಗಳು ಹೇಳಿದ್ದವು. ಈ ಚುನಾವಣೆ ವೇಳೆಯೂ ಕಳೆದ ಬಾರಿಯಂತೆ ಮತದಾನಕ್ಕೂ ಫಲಿತಾಂಶಕ್ಕೂ ದೀರ್ಘ ಅಂತರವಿದೆ. ಅಷ್ಟಕ್ಕೂ ಜನರಲ್ಲಿರುವ ಅನಿಶ್ಚಿತತೆ ಮತ್ತು ವಂಚನೆಯ ಆತಂಕವನ್ನು ದೂರಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊರುತ್ತದೆಯೇ?





