ಕೇರಳ ರಾಜ್ಯವು ದೇಶದಲ್ಲಿ ಕಡು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಿದ ಮೊದಲ ರಾಜ್ಯವೆಂಬ ಗೌರವಕ್ಕೆ ಪಾತ್ರವಾಗಿದೆ. ಈ ಸಾಧನೆಯನ್ನು ಶನಿವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿದರು. ಕೇರಳ ‘ಪಿರವಿ’ ಅಥವಾ ರಾಜ್ಯ ರಚನಾ ದಿನದ ಅಂಗವಾಗಿ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಈ ಐತಿಹಾಸಿಕ ಪ್ರಕಟಣೆ ಘೋಷಿಸಲಾಯಿತು.
“ಇಂದಿನ ಕೇರಳ ಪಿರವಿ ಇತಿಹಾಸದಲ್ಲಿ ಸ್ಥಾನ ಪಡೆದಿದೆ. ನಾವು ಕೇರಳವನ್ನು ಅತ್ಯಂತ ಬಡತನವಿಲ್ಲದ ಭಾರತದ ಮೊದಲ ರಾಜ್ಯವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಈ ವಿಧಾನಸಭೆಯು ಅನೇಕ ಐತಿಹಾಸಿಕ ಕಾನೂನುಗಳು ಮತ್ತು ನೀತಿ ಘೋಷಣೆಗಳನ್ನು ಕಂಡಿದೆ. ಇದೀಗ ನವ ಕೇರಳ ಸೃಷ್ಟಿಯಲ್ಲಿ ಮತ್ತೊಂದು ಮೈಲುಗಲ್ಲನ್ನು ಗುರುತಿಸುವ ಕ್ಷಣದಲ್ಲಿ ಸಭೆ ಸೇರಿದೆ” ಎಂದು ಮುಖ್ಯಮಂತ್ರಿ ಹೇಳಿದರು.
2021ರಲ್ಲಿ ಹೊಸ ಸಚಿವ ಸಂಪುಟ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಸಭೆಯಲ್ಲಿ ಅತ್ಯಂತ ಬಡತನ ನಿರ್ಮೂಲನವನ್ನು ಮುಖ್ಯ ನಿರ್ಧಾರವನ್ನಾಗಿ ತೆಗೆದುಕೊಳ್ಳಲಾಗಿತ್ತು. “ಇದು ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದನ್ನು ಈಡೇರಿಸುವ ಆರಂಭವಾಗಿತ್ತು” ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ಭಾರತದಲ್ಲಿ ಶೇ.100 ರಷ್ಟು ಸಾಕ್ಷರತೆ, ಮೊದಲ ಡಿಜಿಟಲ್ ಸಾಕ್ಷರ ರಾಜ್ಯ ಮತ್ತು ಸಂಪೂರ್ಣ ವಿದ್ಯುದ್ದೀಕರಣ ಹೊಂದಿದ ಕೇರಳವು ಅತ್ಯಂತ ಬಡತನದಿಂದ ಹೊರಬರುವ ಸಾವಿರಾರು ಜನರನ್ನು ಎತ್ತಿ ಹಿಡಿಯಲು ಹಲವು ಕ್ರಮಗಳನ್ನು ಕೈಗೊಂಡಿತು.
ರೂ. 1,000 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಸರ್ಕಾರವು 20,648 ಕುಟುಂಬಗಳಿಗೆ ದೈನಂದಿನ ಆಹಾರ ಒದಗಿಸಿತು. ಇದರಲ್ಲಿ 2,210 ಕುಟುಂಬಗಳಿಗೆ ಬಿಸಿ ಊಟ, 85,721 ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಔಷಧಗಳು ಹಾಗೂ ಸಾವಿರಾರು ಮಂದಿಗೆ ವಸತಿ ಒದಗಿಸಲಾಗಿದೆ.
5,400ಕ್ಕೂ ಹೆಚ್ಚು ಹೊಸ ಮನೆಗಳನ್ನು ನಿರ್ಮಿಸಲಾಗಿದ್ದು ಅಥವಾ ನಿರ್ಮಾಣ ಹಂತದಲ್ಲಿವೆ, 5,522 ಮನೆಗಳನ್ನು ದುರಸ್ತಿ ಮಾಡಲಾಗಿದೆ ಮತ್ತು 2,713 ಭೂರಹಿತ ಕುಟುಂಬಗಳಿಗೆ ಮನೆ ಕಟ್ಟಲು ಭೂಮಿ ನೀಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಹಾರದಲ್ಲಿ ಕೋಟಿ ಉದ್ಯೋಗದ ಭರವಸೆ; ಹಳೆಯ ಭರವಸೆ ಎಲ್ಲಿ ಹೋಯಿತು ಮೋದೀಜೀ?
ಇದಲ್ಲದೆ, 21,263 ಜನರಿಗೆ ಪಡಿತರ ಚೀಟಿ, ಆಧಾರ್ ಮತ್ತು ಪಿಂಚಣಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಮೊದಲ ಬಾರಿಗೆ ನೀಡಲಾಗಿದೆ ಹಾಗೂ 4,394 ಕುಟುಂಬಗಳಿಗೆ ಉಪಜೀವನಾ ಯೋಜನೆಗಳ ಬೆಂಬಲ ದೊರೆತಿದೆ ಎಂದು ವಿಜಯನ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಸಾಧನೆಯು ರಾಜಕೀಯ ಗಡಿಗಳನ್ನು ಮೀರಿದ ಸಮನ್ವಯ ಪ್ರಯತ್ನಗಳ ಫಲಿತಾಂಶವಾಗಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್ ಆಡಳಿತದಡಿ ಬರುವ ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯಿಂದ ಸಾಧ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿರೋಧ ಪಕ್ಷದ ಬಹಿಷ್ಕಾರ, ವಿಜಯನ್ ತಿರುಗೇಟು
ವಿಶೇಷ ವಿಧಾನಸಭಾ ಅಧಿವೇಶನ ಆರಂಭವಾದಾಗ, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು “ಕೇವಲ ಮೋಸ” ಮತ್ತು “ಸದನದ ನಿಯಮಗಳ ತಿರಸ್ಕಾರ” ಎಂದು ಕರೆದರು.
“ಆದ್ದರಿಂದ ನಾವು ಇದರಲ್ಲಿ ಪಾಲ್ಗೊಳ್ಳಲಾರೆವು ಮತ್ತು ಅಧಿವೇಶನವನ್ನು ಸಂಪೂರ್ಣ ಬಹಿಷ್ಕರಿಸುತ್ತೇವೆ” ಎಂದು ಸತೀಶನ್ ಹೇಳಿ ವಿಪಕ್ಷ ಸದಸ್ಯರ ಜೊತೆ ಸದನದಿಂದ ಹೊರನಡೆದರು.
ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಜಯನ್, ಯುಡಿಎಫ್ “ಮೋಸ” ಎಂದು ಹೇಳುವುದು ತಮ್ಮದೇ ವರ್ತನೆಯನ್ನು ಸೂಚಿಸುತ್ತದೆ ಎಂದು ತಿರುಗೇಟು ನೀಡಿದರು. “ನಾವು ಕೇವಲ ಜಾರಿಗೊಳಿಸಬಹುದಾದ್ದನ್ನೇ ಹೇಳುತ್ತೇವೆ. ನಾವು ಹೇಳಿದ್ದನ್ನು ಜಾರಿಗೊಳಿಸಿದ್ದೇವೆ. ಇದೇ ವಿರೋಧ ಪಕ್ಷದ ನಾಯಕರಿಗೆ ನಮ್ಮ ಉತ್ತರ” ಎಂದು ಅವರು ಹೇಳಿದರು.





