ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರು ಮಾರಣಾಂತಿಕವಾಗಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ತ್ರಿಶೂರು ಜಿಲ್ಲೆಯ ಕುನ್ನಕುಳಂ ಪೊಲೀಸ್ ಠಾಣೆಯಲ್ಲಿ 2023ರ ಏಪ್ರಿಲ್‌ನಲ್ಲಿ ಘಟನೆ ನಡೆದಿದೆ. ಘಟನೆಯು ಇದೀಗ ಬೆಳಕಿಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋ ಕೇರಳ ರಾಜಕೀಯದಲ್ಲಿ ವಿವಾದ ಸೃಷ್ಟಿಸಿದೆ. ವಿಪಕ್ಷಗಳು ಘಟನೆಯನ್ನು ಖಂಡಿಸಿದ್ದು, ಸರ್ಕಾರದ ಮೌನದ ಬಗ್ಗೆ ಟೀಕೆ ವ್ಯಕ್ತಪಡಿಸಿವೆ.
ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಕೇರಳದಲ್ಲಿ ಎಗ್ಗಿಲ್ಲದೆ ಪೊಲೀಸ್ ದೌರ್ಜನ್ಯಗಳು ನಡೆಯುತ್ತಿವೆ. ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕುನ್ನಂಕುಳಂ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ವಿ.ಎಸ್ ಸುಜಿತ್‌ಗೆ ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿರುವ ವಿಡಿಯೋ ನೋಡಿ, ಆತಂಕಗೊಂಡಿದ್ದೇನೆ. ಪೊಲೀಸ್ ಠಾಣೆಗಳು ಚಿತ್ರಹಿಂಸೆ ನೀಡುವ ಸ್ಥಳಗಳಾಗುತ್ತಿವೆ. ಗೃಹಖಾತೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸರ್ಕಾರ ಘಟನೆಯ ಹೊಣೆ ಹೊರಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳನ್ನು ವಜಾಗೊಳಿಸಬೇಕು” ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಸರ್ಕಾರವು ಔಪಚಾರಿಕ ಹೇಳಿಕೆ ನೀಡಿಲ್ಲ. ಆದರೂ, ತ್ರಿಶೂರು ವಲಯ ಡಿಐಜಿ ಎಸ್ ಹರಿಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು, “ಎರಡು ವರ್ಷಗಳ ಹಿಂದೆಯೇ ಇಲಾಖಾ ತನಿಖೆ ನಡೆಸಲಾಗಿದೆ. ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಬಡ್ತಿ ಸೌಲಭ್ಯವನ್ನು 2 ವರ್ಷ ತಡೆಹಿಡಿಯಲಾಗಿದೆ:” ಎಂದು ಹೇಳಿದ್ದಾರೆ.




