ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎ ಮೊಹಮದ್ ಮುಸ್ತಕ್ಯೂ ಹಾಗೂ ಎಂ ಎ ಅಬ್ದುಲ್ ಹಕೀಮ್ ನೇತೃತ್ವದ ಪೀಠವು ನಿಯಮಾವಳಿಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಸಮಸ್ಯೆಯು ಗಂಭಿರವಾಗಿದೆ ಎಂದರೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯು ಬಿಗ್‌ಬಾಸ್ ಕಾರ್ಯಕ್ರಮವನ್ನು ನಿಲ್ಲಿಸುವುದು ಸೂಕ್ತ ಎಂದು ನಿರ್ದೇಶಿಸಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸುವ ಮಲಯಾಳಂ ನಟ ಮೋಹನ್ ಲಾಲ್, ನಿರ್ಮಾಣ ಸಂಸ್ಥೆ ಎಂಡಿಮೊಲ್ ಶೈನ್ ಇಂಡಿಯಾ ಹಾಗೂ ಪ್ರಸಾರ ಮಾಡುವ ವಿದ್ಯುನ್ಮಾನ ಮಾಧ್ಯಮಗಳಾದ ಏಷ್ಯಾನೆಟ್ ಹಾಗೂ ಡಿಸ್ನಿ ಸ್ಟಾರ್ ಸಂಸ್ಥೆಗಳಿಗೆ ನೋಟಿಸ್ ನೀಡಲಾಯಿತು.
ಮಲಯಾಳಂ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿರುವ ಹಸೀಬ್ ಎಸ್‌ಕೆ ಅವರಿಗೂ ಕೂಡ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು. ಈ ಸ್ಪರ್ಧಿಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಬಿಗ್‌ಬಾಸ್ ಮಲಯಾಳಂ 6ನೇ ಆವೃತ್ತಿಯಲ್ಲಿ ಹಲ್ಲೆ ನಡೆಯುವಂತಹ ಘಟನೆಗಳು ಸಂಭವಿಸುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿದರು.
ನಟ ಮೋಹನ್ ಲಾಲ್ ಕೂಡ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ರೀತಿಯೂ ಕೂಡ ಘಟನೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ. ಹಲ್ಲೆ ನಡೆಯುವ ಘಟನೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ಕೇಂದ್ರ ಮಾಹಿತಿ ಪ್ರಸಾರ ನಿಯಮಗಳನ್ನು ಕೂಡ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಕೋರ್ಟ್‌ಗೆ ಮನವರಿಕೆ ಮಾಡಿದರು.
ಅರ್ಜಿದಾರರ ಮನವಿಯನ್ನು ಆಲಿಸಿದ ಕೋರ್ಟ್ ಪ್ರಕರಣವು ಗಂಭೀರ ಆತಂಕವನ್ನು ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೆ ಕೇಂದ್ರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.





