‘ದಿ ಕೇರಳ ಸ್ಟೋರಿ 2’ ಚಿತ್ರದ ಪ್ರಮಾಣೀಕರಣ ವಿವಾದ ಮತ್ತು ರಾಜ್ಯವನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಎಂಬ ಆರೋಪಗಳ ನಡುವೆ, ಬುಧವಾರ (ಫೆ. 25) ನಾವೇ ಖುದ್ದಾಗಿ ಈ ಚಿತ್ರವನ್ನು ವೀಕ್ಷಿಸುವುದಾಗಿ ಕೇರಳ ಹೈಕೋರ್ಟ್ ಮಂಗಳವಾರ ತಿಳಿಸಿದೆ.
ಚಿತ್ರದ ಬಿಡುಗಡೆ ಹಾಗೂ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಪೀಠ, “ಸಾಮಾನ್ಯವಾಗಿ ಕಲಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಹಿಂಜರಿಯುತ್ತವೆ. ಆದರೆ, ಚಿತ್ರದ ಶೀರ್ಷಿಕೆಯಲ್ಲಿ ರಾಜ್ಯದ ಹೆಸರನ್ನು ಬಳಸಿರುವುದರಿಂದ ಕೇರಳದ ಜನರ ಕಳವಳವನ್ನು ನಿರ್ಲಕ್ಷಿಸುವಂತಿಲ್ಲ” ಎಂದು ಅಭಿಪ್ರಾಯಪಟ್ಟಿದೆ.
”ಕೇರಳದಲ್ಲಿ ಜನರು ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಈ ಘಟನೆಗಳು ಇಡೀ ಕೇರಳದಲ್ಲಿ ನಡೆಯುತ್ತಿವೆ ಎಂಬಂತೆ ನೀವು ಬಿಂಬಿಸಿದ್ದೀರಿ. ಇದು ತಪ್ಪು ಸಂದೇಶ ರವಾನಿಸುವುದಲ್ಲದೆ, ಜನರ ಭಾವನೆಗಳನ್ನು ಕೆರಳಿಸುವ ಸಾಧ್ಯತೆಯಿದೆ. ಇಲ್ಲಿ ಸೆನ್ಸಾರ್ ಮಂಡಳಿಯ ಪಾತ್ರ ಪ್ರಮುಖವಾಗುತ್ತದೆ. ನೀವು ಈ ಬಗ್ಗೆ ಗಮನ ಹರಿಸಿದ್ದೀರಾ?” ಎಂದು ನ್ಯಾಯಾಲಯವು ಸೆನ್ಸಾರ್ ಮಂಡಳಿಯನ್ನು (CBFC) ಪ್ರಶ್ನಿಸಿದೆ.
ನಾಳೆ ಚಿತ್ರ ಪ್ರದರ್ಶನಕ್ಕೆ ಸೂಚನೆ
ಮುಂದಿನ ಆದೇಶ ನೀಡುವ ಮುನ್ನ ಚಿತ್ರವನ್ನು ವೀಕ್ಷಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. “ನಾನು ಸಾಮಾನ್ಯವಾಗಿ ಯಾವುದೇ ಸಿನಿಮಾದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅದು ಕಲಾತ್ಮಕ ಸ್ವಾತಂತ್ರ್ಯ. ಆದರೆ, ಇದು ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದು ನೀವು ಹೇಳುತ್ತಿದ್ದೀರಿ ಮತ್ತು ಚಿತ್ರಕ್ಕೆ ‘ಕೇರಳ’ ಎಂಬ ಹೆಸರನ್ನೂ ನೀಡಿದ್ದೀರಿ. ಇದು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿ ನಾನು ನಾಳೆ ಸಿನಿಮಾ ನೋಡುತ್ತೇನೆ. ನಾಳೆ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿ” ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಚಿತ್ರ ಪ್ರದರ್ಶನದ ಸಮಯ ಮತ್ತು ಸ್ಥಳದ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ನಿರ್ಮಾಪಕರಿಗೆ ನಿರ್ದೇಶಿಸಲಾಗಿದೆ.
ಇದನ್ನು ಓದಿದ್ದೀರಾ? ಕಳಚಿಬಿದ್ದ ಅಜೇಯತೆಯ ಕಿರೀಟ: ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಇನ್ನೂ ದುರ್ಗಮ
ವಿಚಾರಣೆ ವೇಳೆ, “ಕೇರಳವು ಜಾತ್ಯತೀತತೆಯ ನಾಡು” ಮತ್ತು “ಇಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ” ಎಂದು ಹೈಕೋರ್ಟ್ ಉಲ್ಲೇಖಿಸಿತು. ಸಮಾಜದ ಕೆಲವು ವರ್ಗಗಳು ವ್ಯಕ್ತಪಡಿಸಿದ ಆತಂಕಗಳನ್ನು ಪರಿಗಣಿಸಬೇಕು, ಅದರಲ್ಲೂ ‘ನೈಜ ಘಟನೆಗಳ ಆಧಾರಿತ’ ಎಂದು ಹೇಳಿಕೊಳ್ಳುವ ಚಿತ್ರಗಳ ವಿಚಾರದಲ್ಲಿ ಎಚ್ಚರ ವಹಿಸಬೇಕು ಎಂದು ಪುನರುಚ್ಚರಿಸಿತು. ಇದೇ ವೇಳೆ, ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ‘ಹಾಲ್’ (2025) ಚಿತ್ರದ ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದ್ದ ಹಿಂದಿನ ಉದಾಹರಣೆಯನ್ನು ನ್ಯಾಯಾಲಯ ಸ್ಮರಿಸಿತು.
ಯಾವುದೇ ಧರ್ಮ ಅಥವಾ ಪಂಗಡಕ್ಕೆ ಧಕ್ಕೆ ತರುವಂತಹ ದೃಶ್ಯಗಳು ಚಿತ್ರದಲ್ಲಿಲ್ಲ. ಚಿತ್ರವು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ನಿರ್ಮಾಪಕರ ಪರ ವಕೀಲರು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರು, “ಚಿತ್ರದಲ್ಲಿ ಯುವತಿಯರ ಗುಂಪೊಂದನ್ನು ‘ಲವ್ ಜಿಹಾದ್ ಬಲಿಪಶುಗಳು’ ಎಂಬ ಹಣೆಪಟ್ಟಿಯೊಂದಿಗೆ ತೋರಿಸಲಾಗಿದೆ. ಆದರೆ, ಚಿತ್ರದಲ್ಲಿ ಬರುವ ಒಬ್ಬನೇ ಒಬ್ಬ ಸಂತ್ರಸ್ತೆ ಕೇರಳದವರಲ್ಲ. ಹೀಗಿದ್ದರೂ, ಚಿತ್ರಕ್ಕೆ ‘ದಿ ಕೇರಳ ಸ್ಟೋರಿ 2’ ಎಂದು ಹೆಸರಿಡಲಾಗಿದ್ದು, ಇದು ಉದ್ದೇಶಪೂರ್ವಕವಾಗಿ ಕೇರಳ ಸಮಾಜವನ್ನು ಕೆಟ್ಟದಾಗಿ ಬಿಂಬಿಸುವ ಯತ್ನವಾಗಿದೆ” ಎಂದು ವಾದ ಮಂಡಿಸಿದರು.
ನ್ಯಾಯಾಲಯವು ಬುಧವಾರ ಚಿತ್ರ ವೀಕ್ಷಿಸಿದ ಬಳಿಕ ಮುಂದಿನ ನಿರ್ದೇಶನಗಳನ್ನು ನೀಡುವ ನಿರೀಕ್ಷೆಯಿದೆ. ಈ ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದು, ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಮಾಡಿದ್ದಾರೆ.





