ಕೇರಳದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಿರುವನಂತಪುರಂ ಬಳಿಕ ತೃಕ್ಕಣ್ಣಾಪುರದ ಆನಂದ್ ಕೆ ಥಂಪಿ ಎಂಬವರು ತಮ್ಮ ಮನೆಯ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೇರಳ ರಾಜಧಾನಿಯಾಗಿರುವ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ತೃಕ್ಕಣ್ಣಾಪುರಂ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆನಂದ್ ಬಯಸಿದ್ದರು. ಬಿಜೆಪಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಆನಂದ್ ಹೆಸರು ಇರಲಿಲ್ಲವೆಂದು ವರದಿಯಾಗಿದೆ.
ತಮಗೆ ಟಿಕೆಟ್ ನೀಡದ ಕಾರಣ, ಆನಂದ್ ಅಸಮಾಧಾನಗೊಂಡಿದ್ದರು. ಅಲ್ಲದೆ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದೇ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್ ನಾಯಕರ ವಿರುದ್ಧವೂ ನಾನಾ ರೀತಿಯ ಆರೋಪ ಮಾಡಿದ್ದರು ಎಂದು ಹೇಳಲಾಗಿದೆ.
“ಮರಳು ಕಳ್ಳಸಾಗಣೆ ಮಾಫಿಯಾ ಜೊತೆಗೆ ಕೆಲವು ಸ್ಥಳೀಯ ನಾಯಕರು ಸಂಪಬಂಧ ಹೊಂದಿದ್ದಾರೆ. ಅವರ ಹಿತಾಸಕ್ತಿಗಗಿ ನನಗೆ ಟಿಕೆಟ್ ನಿರಾಕರಿಸಲಾಗಿದೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸದ ಬಳಿಕ, ಜೊತೆಗಿದ್ದವರೂ ನನ್ನಿಂದ ದೂರವಾಗಲು ಪ್ರಾರಂಭಿಸಿದರು” ಎಂದು ಆನಂದ್ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮ್ಮ ಸಾವಿಗೂ ಮುನ್ನ ಆನಂದ್ ಮಾಡಿರುವ ಆರೋಪಗಳನ್ನು ಬಿಜೆಪಿ ನಾಯಕರು ನಿರಾಕರಿಸಿದ್ದಾರೆ. ಅವರು ಟಿಕೆಟ್ ಕೋರಿ ನಮ್ಮನ್ನು ಸಂಪರ್ಕಿಸಿಲ್ಲ. ಅವರ ಸಾವನ್ನು ಟಿಕೆಟ್ ನಿರಾಕರಣೆ ಜೊತೆ ಸಂಬಂಧ ಕಲ್ಪಿಸಬಾರದು ಎಂದು ಹೇಳಿದ್ದಾರೆ.




