‘ದಿ ಕೇರಳ ಸ್ಟೋರಿ 2’ ಚಲನಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದ ಭುಗಿಲೆದ್ದಿದ್ದು, ಇದು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆಯೊಡ್ಡುವಂತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇರಳದ ಮೂಲಭೂತ ಗುರುತಾಗಿರುವ ಧಾರ್ಮಿಕ ಸೌಹಾರ್ದತೆಯ ಪರಂಪರೆಗೆ ಈ ಚಿತ್ರವು ಧಕ್ಕೆ ತರಲಿದೆ ಎಂದು ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಈ ಚಿತ್ರದ ಮೊದಲ ಭಾಗವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, “ಅದು ರಾಜ್ಯದ ವಿರುದ್ಧ ದ್ವೇಷ ಹರಡುವ ಮತ್ತು ಜಾತ್ಯತೀತ ಪರಂಪರೆಯನ್ನು ಹಾಳುಮಾಡುವ ಉದ್ದೇಶವನ್ನು ಹೊಂದಿತ್ತು. ಸುಳ್ಳು, ದ್ವೇಷ ಮತ್ತು ಕೇರಳ ವಿರೋಧಿ ಪ್ರಚಾರದಿಂದ ಕೂಡಿದ್ದ ಮೊದಲ ಭಾಗವನ್ನು ಕೋಮು ಪ್ರಚೋದನೆಯ ಉದ್ದೇಶದಿಂದಲೇ ನಿರ್ಮಿಸಲಾಗಿತ್ತು ಎಂಬುದು ಈ ದೇಶಕ್ಕೆ ಅರಿವಾಗಿದೆ,” ಎಂದರು. ಬಲವಂತದ ಮತಾಂತರದ ಘಟನೆಗಳನ್ನು ಬಿಂಬಿಸುತ್ತದೆ ಎನ್ನಲಾದ ಎರಡನೇ ಭಾಗವು ಸಹ ಅಪಪ್ರಚಾರ ಮಾಡುತ್ತಿದೆ ಎಂಬ ಆರೋಪಗಳು ಹಲವು ವಲಯಗಳಿಂದ ಕೇಳಿಬಂದಿವೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ತಮ್ಮ ಹೇಳಿಕೆಯಲ್ಲಿ ಮುಖ್ಯಮಂತ್ರಿ, “ಸಮಾಜದಲ್ಲಿ ವಿಭಜನೆ ಮತ್ತು ದ್ವೇಷವನ್ನು ಹರಡಲು ನಿರ್ಮಿಸಲಾದ ಇಂತಹ ವಿಷಕಾರಿ ಕೃತ್ಯಗಳಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಏಕೆ ಅವಕಾಶ ನೀಡಲಾಗುತ್ತಿದೆ?” ಎಂದು ಪ್ರಶ್ನಿಸಿದ್ದಾರೆ. ಕೇವಲ ಶೀರ್ಷಿಕೆಯ ಕಾರಣಕ್ಕೆ ‘ಬೀಫ್’ (ಸ್ಪ್ಯಾನಿಷ್ ಚಿತ್ರ) ದಂತಹ ಚಿತ್ರಗಳನ್ನು ಚಲನಚಿತ್ರೋತ್ಸವಗಳಿಂದ ನಿಷೇಧಿಸಿರುವಾಗ ಇಂತಹ ದ್ವೇಷಪೂರಿತ ಚಿತ್ರಗಳಿಗೆ ಅವಕಾಶ ನೀಡುತ್ತಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿನ ಅಂತರ್-ಧರ್ಮೀಯ ಸಂಬಂಧಗಳ ಚಿತ್ರಣವನ್ನು ಕಟುವಾಗಿ ಟೀಕಿಸಿದ ಅವರು, “ಪರಸ್ಪರ ಒಪ್ಪಿಗೆಯಿಂದ ನಡೆದ ವಿವಾಹಗಳನ್ನೂ ಸಹ ಕೋಮುವಾದ ಮತ್ತು ಬಲವಂತದ ಮತಾಂತರದ ಉದಾಹರಣೆಗಳಾಗಿ ಬಿಂಬಿಸುವ ಮೂಲಕ ಸುಳ್ಳು ಪ್ರಚಾರವನ್ನು ಹರಡಲಾಗುತ್ತಿದೆ,” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…
ಕೇರಳದಲ್ಲಿ ನೆಲೆಸಿರುವ ಶಾಂತಿಯನ್ನು ಕದಡಲು ಹೊರಗಿನ ಶಕ್ತಿಗಳು ಯತ್ನಿಸುತ್ತಿವೆ ಎಂದು ಎಚ್ಚರಿಸಿದ ವಿಜಯನ್, “ಕೋಮು ಗಲಭೆಗಳೇ ಇಲ್ಲದ ಹಾಗೂ ಸಮುದಾಯಗಳ ನಡುವೆ ಪರಸ್ಪರ ಗೌರವದ ಪರಂಪರೆ ಹೊಂದಿರುವ ಕೇರಳದ ಬಗ್ಗೆ ಇಂತಹ ಶಕ್ತಿಗಳಿಗೆ ದ್ವೇಷವಿದೆ. ಇವರನ್ನು ‘ರಾಜ್ಯದ ಶತ್ರುಗಳು’ ಎಂದು ಕರೆದಿರುವ ಅವರು, ಇಂತಹ ಚಲನಚಿತ್ರಗಳ ಮೂಲಕ ಈ ಭಾಗದ ಶಾಂತಿ ಮತ್ತು ನೆಮ್ಮದಿಯನ್ನು ಕದಡಲು ಯತ್ನಿಸಲಾಗುತ್ತಿದೆ,” ಎಂದರು.
“ಸುಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರಲ್ಲಿ ಮಾದರಿಯಾಗಿರುವ, ಹಾಗೂ ಧಾರ್ಮಿಕ ಸೌಹಾರ್ದತೆಯ ಬೀಡಾಗಿರುವ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂಬಂತೆ ಬಿಂಬಿಸುವ ಪ್ರಯತ್ನಗಳನ್ನು ನಾವೆಲ್ಲರೂ ಒಟ್ಟಾಗಿ ತಿರಸ್ಕರಿಸಬೇಕು. ಸುಳ್ಳು ಪ್ರಚಾರಗಳಿಂದ ಕೇರಳದ ಜಾತ್ಯತೀತ ಬುನಾದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮತ್ತು ಜಾತ್ಯತೀತತೆ ಹಾಗೂ ಸಹೋದರತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ,” ಎಂದು ಅವರು ನಾಗರಿಕರಿಗೆ ಕರೆ ನೀಡಿದ್ದಾರೆ.
ಸರಣಿಯ ಮೊದಲ ಚಿತ್ರವಾದ ‘ದಿ ಕೇರಳ ಸ್ಟೋರಿ’ಯಲ್ಲಿ ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದರು. ನಿಷೇಧ ಮತ್ತು ವಿವಾದಗಳ ನಡುವೆಯೂ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಿತು. ಅಷ್ಟೇ ಅಲ್ಲದೆ, ಈ ಚಿತ್ರಕ್ಕಾಗಿ ಸುದೀಪ್ತೋ ಸೇನ್ ಅತ್ಯುತ್ತಮ ನಿರ್ದೇಶಕ ಹಾಗೂ ಪ್ರಶಾಂತನು ಮಹಾಪಾತ್ರ ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಇದೀಗ ‘ದಿ ಕೇರಳ ಸ್ಟೋರಿ 2’ ಫೆಬ್ರವರಿ 27 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಉಲ್ಕಾ ಗುಪ್ತಾ, ಐಶ್ವರ್ಯ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.





