ವಿವಾದಿತ ‘ಮಲಯಾಳಂ ಭಾಷಾ ಮಸೂದೆ- 2025’ರ ಕುರಿತು ನೆರೆಯ ಕರ್ನಾಟಕ ಸೇರಿದಂತೆ ವಿವಿಧೆಡೆಗಳಿಂದ ವ್ಯಕ್ತವಾಗುತ್ತಿರುವ ಆತಂಕಗಳಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೆರೆ ಎಳೆದಿದ್ದಾರೆ. “ನಮ್ಮ ಸರ್ಕಾರ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವ ಉದ್ದೇಶ ಹೊಂದಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮತ್ತು ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಮಸೂದೆಯ ಕುರಿತು ಎದ್ದಿರುವ ಊಹಾಪೋಹಗಳು ಸತ್ಯಕ್ಕೆ ದೂರವಾದವು ಎಂದು ಪ್ರತಿಪಾದಿಸಿದ್ದಾರೆ.
ಮಸೂದೆಯಲ್ಲೇನಿದೆ? ಸಿಎಂ ಹೇಳಿದ್ದೇನು?
ಕೇರಳ ವಿಧಾನಸಭೆ ಅಂಗೀಕರಿಸಿರುವ ಈ ಮಸೂದೆಯು ರಾಜ್ಯದ ಸಾಂವಿಧಾನಿಕ ಮೌಲ್ಯಗಳು ಮತ್ತು ಬಹುತ್ವವನ್ನು ಎತ್ತಿಹಿಡಿಯುವಂತಿದೆ ಎಂದು ವಿಜಯನ್ ತಿಳಿಸಿದ್ದಾರೆ. ಮಸೂದೆಯ 7ನೇ ವಿಧಿಯು (Clause 7) ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸ್ಪಷ್ಟವಾಗಿ ರಕ್ಷಿಸುತ್ತದೆ.
”ಭಾಷಾ ಅಲ್ಪಸಂಖ್ಯಾತರು ಹೆಚ್ಚಿರುವ ನಿರ್ದಿಷ್ಟ ಪ್ರದೇಶಗಳಲ್ಲಿ (Notified Areas), ತಮಿಳು ಮತ್ತು ಕನ್ನಡ ಭಾಷಿಕರು ತಮ್ಮ ಮಾತೃಭಾಷೆಯಲ್ಲೇ ಸಚಿವಾಲಯ, ಇಲಾಖಾ ಮುಖ್ಯಸ್ಥರು ಹಾಗೂ ಸ್ಥಳೀಯ ಕಚೇರಿಗಳೊಂದಿಗೆ ಪತ್ರವ್ಯವಹಾರ ನಡೆಸಬಹುದು. ಅಲ್ಲದೆ, ಅವರಿಗೆ ಅದೇ ಭಾಷೆಯಲ್ಲಿ (ಕನ್ನಡ ಅಥವಾ ತಮಿಳು) ಉತ್ತರ ಪಡೆಯುವ ಹಕ್ಕನ್ನು ನೀಡಲಾಗಿದೆ” ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
ಶಿಕ್ಷಣದಲ್ಲಿ ಕನ್ನಡಕ್ಕೆ ಧಕ್ಕೆಯಿಲ್ಲ
ಕಾಸರಗೋಡು ಸೇರಿದಂತೆ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಲಾಗುತ್ತಿದೆ ಎಂಬ ಕರ್ನಾಟಕದ ನಾಯಕರ ಕಳವಳಕ್ಕೆ ವಿಜಯನ್ ಉತ್ತರಿಸಿದ್ದಾರೆ. “ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಂತೆಯೇ, ಮಲಯಾಳಂ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯನ್ನು ಕಲಿಯಲು ಮುಕ್ತ ಅವಕಾಶವಿದೆ. ಹೊರ ರಾಜ್ಯ ಅಥವಾ ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ 9, 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತದಲ್ಲಿ ಮಲಯಾಳಂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ತುರ್ಕಮಾನ್ ಗೇಟ್ | ಅಂದು ಸಂಜಯ್ ಗಾಂಧಿ, ಇಂದು…? ಬದಲಾಗದ ಬುಲ್ಡೋಜರ್ ದರ್ಬಾರ್
ವಿವಾದದ ಹಿನ್ನೆಲೆ
ಕೇರಳದ ನೂತನ ಮಲಯಾಳಂ ಭಾಷಾ ಮಸೂದೆಯು ಗಡಿ ಭಾಗದ ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆಗೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸಿಎಂಗೆ ಪತ್ರ ಬರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪಿಣರಾಯಿ ವಿಜಯನ್ ಈ ಸ್ಪಷ್ಟನೆ ನೀಡಿದ್ದಾರೆ.
”ಭಾರತದ ವೈವಿಧ್ಯತೆಯನ್ನು ನಾವು ಆಚರಿಸಬೇಕೇ ಹೊರತು, ಅದನ್ನು ಒಂದೇ ಅಚ್ಚಿಗೆ ಒಗ್ಗಿಸಲು ಸಾಧ್ಯವಿಲ್ಲ. ಕೇರಳದ ಅಭಿವೃದ್ಧಿಯು ಸಮಾನತೆ ಮತ್ತು ಸಹೋದರತ್ವದ ತಳಹದಿಯ ಮೇಲೆ ನಿಂತಿದೆ. ಯಾವುದೇ ಪ್ರಜೆಯ ಭಾಷಾ ಅಸ್ಮಿತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ವಿಜಯನ್ ಹೇಳಿದ್ದಾರೆ.
ಈ ಮಸೂದೆಯು 1963ರ ಅಧಿಕೃತ ಭಾಷಾ ಕಾಯ್ದೆ ಮತ್ತು ಸಂವಿಧಾನದ 346 ಹಾಗೂ 347ನೇ ವಿಧಿಗಳಿಗೆ ಅನುಗುಣವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.





