ಕರ್ನಾಟಕದಲ್ಲಿ ಎಚ್‌ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಮಾತನಾಡುತ್ತಾ, “ನಮ್ಮನ್ನು ಪ್ರೀತಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾಗಿದ್ದಾರೆ” ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ರಾಜ್ಯಸಭೆಯನ್ನು ನಗೆಗಡಲಲ್ಲಿ ತೇಲಿಸಿತು.
ಸಂಸತ್ತಿನ ಮೇಲ್ಮನೆಯ ವಿರೋಧ ಪಕ್ಷದ ನಾಯಕ ಖರ್ಗೆ ಅವರು ಇಂದು ತಮ್ಮ ವಿದಾಯ ಭಾಷಣ ಮಾಡಿದರು. ಈ ಭಾಷಣದ ವೇಳೆ ರಾಜ್ಯಸಭೆಯಲ್ಲಿ ತಮ್ಮ ಅನುಭವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ವ್ಯಂಗ್ಯವಾಡುತ್ತಾ ಎಚ್‌ಡಿ ದೇವೇಗೌಡರ ಕಾಲೆಳೆದರು.
ಇದನ್ನು ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆ ನನಗೆ ಹಿರಿಯ ಅಣ್ಣ, ಭೇಟಿಗೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ: ಸಚಿವ ಪರಮೇಶ್ವರ್
“ದೇವೇಗೌಡರು ಪ್ರಧಾನಿಯಾಗಿದ್ದರು ಮತ್ತು ಹಲವಾರು ಇತರ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಾನು ಅವರನ್ನು 54 ವರ್ಷಗಳಿಂದ ತಿಳಿದಿದ್ದೇನೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಅವರು ನಮ್ಮೊಂದಿಗೆ ಡೇಟಿಂಗ್ ಮಾಡಿದರು, ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮದುವೆಯಾದರು” ಎಂದು ವ್ಯಂಗ್ಯವಾಡಿದರು. ಖರ್ಗೆ ಹೇಳಿಕೆಗೆ ರಾಜ್ಯಸಭೆಯಲ್ಲಿ ಹಾಜರಿದ್ದ ಪ್ರಧಾನಿ ಕೂಡ ನಗುತ್ತಿರುವುದು ಕಂಡುಬಂದಿದೆ.
1996ರ ಲೋಕಸಭಾ ಚುನಾವಣೆಯ ನಂತರ ದೇವೇಗೌಡರು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದರು. ಈ ವೇಳೆ ಜೆಡಿಯು ಸರ್ಕಾರವನ್ನು ಕಾಂಗ್ರೆಸ್ ಬೆಂಬಲಿಸಿತ್ತು. 2018ರ ರಾಜ್ಯ ಚುನಾವಣೆಗೆ ಕರ್ನಾಟಕದಲ್ಲಿ ಎಚ್‌ಡಿ ದೇವೇಗೌಡರ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಈ ಮೈತ್ರಿಕೂಟ ಗೆದ್ದಿತ್ತು. ದೇವೇಗೌಡರ ಮಗ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಹಲವಾರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಂಡಾಯವೆದ್ದ ನಂತರ 2019ರಲ್ಲಿ ರಾಜ್ಯ ಸರ್ಕಾರ ಪತನಗೊಂಡಿತು. ಅದಾದ ಬಳಿಕ ಈವರೆಗೆ ಕೋಮು ವಿಭಜನೆ ವಿಚಾರದಲ್ಲಿ ಯಾವ ಪಕ್ಷವನ್ನೂ ಟೀಕಿಸುತ್ತಿತ್ತೋ ಅದೇ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತು.





