ಸುಪ್ರೀಂ ಕೋರ್ಟ್ ಸಂವಿಧಾನದ 137ನೇ ವಿಧಿ ಅಡಿಯಲ್ಲಿ ತನ್ನದೇ ಆದ ಆದೇಶ ಅಥವಾ ತೀರ್ಪನ್ನು ಮರುಪರಿಶೀಲಿಸುವ ಅಥವಾ ಅಸಾಧಾರಣ ಸಂದರ್ಭದಲ್ಲಿ ಆ ತೀರ್ಪಿಗೆ ತಡೆ ನೀಡುವ, ಹಿಂಪಡೆಯುವ ಅಧಿಕಾರವನ್ನು ಹೊಂದಿದೆ. ಅರಾವಳಿ ಮಾತ್ರವಲ್ಲ ಈ ಹಿಂದೆಯೂ ಸುಪ್ರೀಂ ತನ್ನದೇ ಆದ ಕೆಲವು ಆದೇಶ/ತೀರ್ಪುಗಳಿಗೆ ತಡೆ ನೀಡಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದಂತೆ ತಾನೇ ನೀಡಿದ್ದ ಈ ಹಿಂದಿನ ತೀರ್ಪಿಗೆ ತಾತ್ಕಾಲಿಕವಾಗಿ ತಡೆ ನೀಡಿದೆ. ಈ ಹಿಂದೆ ನವೆಂಬರ್ 20ರಂದು ಅರಾವಳಿ ಬೆಟ್ಟಗಳ ಸಂಬಂಧ ನೀಡಲಾಗಿದ್ದ ವ್ಯಾಖ್ಯಾನಗಳ ಸಂಬಂಧ ಇನ್ನಷ್ಟು ಸ್ಪಷ್ಟತೆಯ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಡಿಸೆಂಬರ್ 29ರಂದು ಈ ಹಿಂದಿನ ಆದೇಶಕ್ಕೆ ತಡೆ ನೀಡಿದೆ. ಅಂದ ಹಾಗೆ ಸುಪ್ರೀಂ ಕೋರ್ಟ್ ತನ್ನ ಆದೇಶಕ್ಕೆ ತಾನೇ ತಡೆ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಆದೇಶ/ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಸಂವಿಧಾನದ 137ನೇ ವಿಧಿ ಅಡಿಯಲ್ಲಿ ತನ್ನದೇ ಆದ ಆದೇಶ ಅಥವಾ ತೀರ್ಪನ್ನು ಮರುಪರಿಶೀಲಿಸುವ ಅಥವಾ ಅಸಾಧಾರಣ ಸಂದರ್ಭದಲ್ಲಿ ಆ ತೀರ್ಪಿಗೆ ತಡೆ ನೀಡುವ, ಹಿಂಪಡೆಯುವ ಅಧಿಕಾರವನ್ನು ಹೊಂದಿದೆ. ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದಾಗ ಈ ಹಿಂದಿನ ಆದೇಶದಲ್ಲಿ ಸ್ಪಷ್ಟವಾದ ದೋಷ ಕಂಡುಬಂದರೆ ಆದೇಶವನ್ನು ಮರುಪರಿಶೀಲಿಸಬಹುದು.
ಇದನ್ನು ಓದಿದ್ದೀರಾ? ಅರಾವಳಿ ಪರ್ವತ ಶ್ರೇಣಿ ಕುರಿತ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹಾಗೆಯೇ ಒಂದು ವೇಳೆ ಸಂತ್ರಸ್ತ ವ್ಯಕ್ತಿಗೆ ಅಥವಾ ಅರ್ಜಿದಾರರಿಗೆ ವಿಚಾರಣೆಗೆ ಅವಕಾಶ ನೀಡದೆಯೇ ಆದೇಶವನ್ನು ಹೊರಡಿಸಿದ್ದರೆ ಅಥವಾ ಗಂಭೀರವಾದ ತಾಂತ್ರಿಕ ದೋಷಗಳಿದ್ದರೆ ಸುಪ್ರೀಂ ಕೋರ್ಟ್ ತನ್ನದೇ ಆದೇಶವನ್ನು ಹಿಂಪಡೆಯುವ ಅವಕಾಶವನ್ನೂ ಸಂವಿಧಾನದ 137ನೇ ವಿಧಿ ನೀಡುತ್ತದೆ. ಇದನ್ನು ಹೊರತುಪಡಿಸಿ ಮರುಪರಿಶೀಲಿನಾ ಅರ್ಜಿ ವಜಾಗೊಂಡ ಬಳಿಕವೂ ನ್ಯಾಯದ ದೃಷ್ಟಿಯಿಂದ ಅನಿವಾರ್ಯವೆನಿಸಿದಾಗ ಕೋರ್ಟ್ ತನ್ನ ಆದೇಶವನ್ನು ಕ್ಯುರೇಟಿವ್ ಅರ್ಜಿ ಮೂಲಕ ಮರುಪರಿಶೀಲನೆ ನಡೆಸಬಹುದು. ಈ ರೀತಿಯ ಪ್ರಕರಣಗಳಲ್ಲಿ ಇತ್ತೀಚಿಗಿನ ಅರಾವಳಿ ಬೆಟ್ಟಗಳ ವ್ಯಾಖ್ಯಾನವೂ ಒಂದು.
ಅರಾವಳಿ ಬೆಟ್ಟಗಳ ವ್ಯಾಖ್ಯಾನ ಪ್ರಕರಣ
ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದ ಸಮಿತಿಯ ಶಿಫಾರಸಿನ ಆಧಾರದಲ್ಲಿ ಕೆಲವು ಮಾನದಂಡಗಳನ್ನು ರೂಪಿಸಿತ್ತು. ಸ್ಥಳೀಯ ಮೇಲ್ಮೈಯಿಂದ ಕನಿಷ್ಠ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಭೂಭಾಗಗಳನ್ನು ಮಾತ್ರ ಅರಾವಳಿ ಬೆಟ್ಟ ಎಂದು ಪರಿಗಣಿಸಲಾಗುವುದು ಮತ್ತು ಹಾಗೆಯೇ 500 ಮೀಟರ್‌ಗಳ ಒಳಗೆ ಇರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ‘ಅರಾವಳಿ ಶ್ರೇಣಿ’ ಎಂದು ಕರೆಯಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು. ಆದರೆ ಈ ತೀರ್ಪು ಅರಾವಳಿಯಲ್ಲಿ ಗಣಿಗಾರಿಕೆ ಹೆಚ್ಚಾಗುವ, ಜೀವಸಂಕುಲ ನಾಶವಾಗುವ ಆತಂಕವನ್ನು ಸೃಷ್ಟಿಸಿತ್ತು.
ಈ ಮಾನದಂಡವನ್ನು ಪರಿಸರವಾದಿಗಳು ಪ್ರಶ್ನಿಸಿದ್ದು, ಈ ತೀರ್ಪಿನಿಂದಾಗಿ ಕಡಿಮೆ ಎತ್ತರದ ಗುಡ್ಡಗಳು, ಸಣ್ಣ ಬೆಟ್ಟಗಳು ಮತ್ತು ಪ್ರಮುಖ ಪರಿಸರ ವಲಯಗಳು ಈ ವ್ಯಾಖ್ಯಾನದಿಂದ ಹೊರಗುಳಿಯುತ್ತದೆ. ಇದರಿಂದಾಗಿ ಶೇ. 90ರಷ್ಟು ಅರಾವಳಿ ಪ್ರದೇಶ ಕಾನೂನು ರಕ್ಷಣೆಯನ್ನು ಕಳೆದುಕೊಂಡು ಗಣಿಗಾರಿಕೆಗೆ ಮುಕ್ತವಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದರು. ಈ ಸಂಬಂಧ ತೀವ್ರ ಪ್ರತಿಭಟನೆ ನಡೆಯುತ್ತಿದ್ದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 29ರಂದು ತನ್ನ ಈ ಹಿಂದಿನ ಆದೇಶಕ್ಕೆ ಸ್ವಯಂಪ್ರೇರಿತವಾಗಿ ತಾನೇ ಮಧ್ಯಂತರ ತಡೆ ನೀಡಿದೆ. ಹೊಸ ಸಮಿತಿ ರಚಿಸಲು ಆದೇಶಿಸಿದೆ. ಹಾಗೆಯೇ ಈ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.
ಬೀದಿ ನಾಯಿಗಳಿಗೆ ಸಂಬಂಧಿಸಿದ ಆದೇಶ
ಆಗಸ್ಟ್ 11ರಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ದೆಹಲಿ ಮತ್ತು ಎನ್‌ಸಿಆರ್‌ನ ಎಲ್ಲಾ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಎಂಟು ವಾರದೊಳಗೆ ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಅವುಗಳನ್ನು ಮತ್ತೆ ಅದೇ ಬೀದಿಗೆ ಬಿಡಬಾರದು ಎಂದು ಆದೇಶಿಸಿತ್ತು. ಆದರೆ ಈ ಆದೇಶಕ್ಕೆ ಪ್ರಾಣಿದಯಾ ಸಂಘಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆಗಸ್ಟ್ 22ರಂದು ಈ ಹಿಂದಿನ ಆದೇಶವು ಬಹಳ ಕಠಿಣವಾಗಿದ್ದು ಎಂದು ಅಭಿಪ್ರಾಯಪಟ್ಟ ತ್ರಿಸದಸ್ಯ ಪೀಠವು ನಾಯಿಗಳನ್ನು ಶಾಶ್ವತವಾಗಿ ಕೂಡಿಡುವುದಕ್ಕೆ ತಡೆ ನೀಡಿತ್ತು.
ಇದನ್ನು ಓದಿದ್ದೀರಾ? ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್
ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿ ಮತ್ತು ಲಸಿಕೆ ನೀಡಿದ ಬಳಿಕ ಮತ್ತೆ ಅದೇ ಸ್ಥಳಕ್ಕೆ ಬಿಡಲು ಅನುಮತಿ ನೀಡಿತು. ಆದರೆ ರೇಬೀಸ್ ಪೀಡಿತ ಅಥವಾ ವಿಪರೀತ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಮಾತ್ರ ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ಸೂಚಿಸಿತ್ತು. ಇದಾದ ಬಳಿಕ ನವೆಂಬರ್ 7ರಂದು ಮತ್ತೊಂದು ಆದೇಶದಲ್ಲಿ ಸುಪ್ರೀಂ ಕೋರ್ಟ್ ಶಾಲೆಗಳು, ಆಸ್ಪತ್ರೆಗಳು, ರೈಲ್ವೆ-ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣಗಳು, ಇಂತಹ ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ತೆರವುಗೊಳಿಸುವಂತೆ ಸೂಚಿಸಿದೆ. ಇಂತಹ ಕಡೆಗಳಿಂದ ಹಿಡಿದ ನಾಯಿಗಳಿಗೆ ಲಸಿಕೆ ನೀಡಿ ಮತ್ತೆ ಅಲ್ಲಿಗೆಯೇ ಬಿಡುಗಡೆ ಮಾಡುವಂತಿಲ್ಲ ಎಂದು ತಿಳಿಸಿದೆ.
ಅರಣ್ಯವಾಸಿಗಳ ತೆರವು ಆದೇಶ
2019ರ ಫೆಬ್ರವರಿ 13ರಂದು ಸುಪ್ರೀಂ ಕೋರ್ಟ್ ಅರಣ್ಯ ಹಕ್ಕು ಕಾಯ್ದೆ(ಎಫ್‌ಆರ್‌ಎ) 2006ರ ಅಡಿಯಲ್ಲಿ ಭೂ ಹಕ್ಕನ ಅರ್ಜಿಗಳನ್ನು ವಜಾಗೊಳಿಸಿ ಬರೋಬ್ಬರಿ 11.8 ಲಕ್ಷ ಅರಣ್ಯವಾಸಿ ಕುಟುಂಬಗಳನ್ನು ತೆರವುಗೊಳಿಸುವಂತೆ 16 ರಾಜ್ಯಗಳಿಗೆ ಆದೇಶಿಸಿತ್ತು. ಈ ಆದೇಶಕ್ಕೆ ಬುಡಕಟ್ಟು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು “ಐತಿಹಾಸಿಕ ಅನ್ಯಾಯ” ಎಂದ ಸಾಮಾಜಿಕ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಕೇಂದ್ರ ಸರ್ಕಾರ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ, ಸಮರ್ಥಿಸುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಾಗ, ಬುಡಕಟ್ಟು ಸಮುದಾಯದ ಮತ ಬ್ಯಾಂಕ್‌ಗೆ ಪರಿಣಾಮ ಬೀರಬಹುದು ಎಂದು ಅರಿತ ಕೇಂದ್ರ ಸರ್ಕಾರವು 2019ರ ಫೆಬ್ರವರಿ 27ರಂದು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತು. ಕೇಂದ್ರದ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಫೆಬ್ರವರಿ 28ರಂದು ತನ್ನ ಹಳೆಯ ಆದೇಶಕ್ಕೆ ತಡೆ ನೀಡಿತು. ಅಲ್ಲದೆ ತಿರಸ್ಕೃತಗೊಂಡ ಅರ್ಜಿಗಳನ್ನು ಮರುಪರಿಶೀಲಿಸುವಂತೆ ರಾಜ್ಯಗಳಿಗೆ ಸೂಚಿಸಿತು.
SC/ST ಕಾಯ್ದೆಯಡಿ ಸ್ವಯಂಚಾಲಿತ ಬಂಧನಕ್ಕೆ ತಡೆ
2018ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿ(ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಕೂಡಲೇ ಬಂಧನಕ್ಕೆ ನಿರ್ಬಂಧ ವಿಧಿಸಿತ್ತು. ದೂರು ದಾಖಲಿಸುವ ಮೊದಲು ಪೂರ್ವಭಾವಿ ತನಿಖೆ ಕಡ್ಡಾಯಗೊಳಿಸಿತ್ತು. ಬಂಧನಕ್ಕೆ ಹಿರಿಯ ಅಧಿಕಾರಯ ಅನುಮತಿ ಅಗತ್ಯ ಎಂದು ಹೇಳಿತ್ತು. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವ ಸಾಧ್ಯತೆಯನ್ನೂ ಉಲ್ಲೇಖಿಸಿತ್ತು. ಆದರೆ ಈ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. 2018ರ ಏಪ್ರಿಲ್‌ನಲ್ಲಿ ದೇಶಾದ್ಯಂತ ದಲಿತ ಮತ್ತು ಆದಿವಾಸಿ ಸಮುದಾಯ, ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹಲವೆಡೆ ಹಿಂಸಾಚಾರ ನಡೆದು ಸಾವುಗಳೂ ಸಂಭವಿಸಿತು.
ಇದನ್ನು ಓದಿದ್ದೀರಾ? ದಲಿತ-ಮಹಿಳೆಯರಿಗೆ ಘನತೆಯ ಹಕ್ಕು ಕೊಟ್ಟ ʼಮನರೇಗಾʼ; ಹಕ್ಕಿನ ಬೇರು ಕಿತ್ತ ʼವಿಬಿ-ಜಿ ರಾಮ್‌ಜಿʼ
ಇವೆಲ್ಲವುದರ ನಡುವೆ ವಿಪಕ್ಷಗಳ ಒತ್ತಡದಿಂದಾಗಿ ಕೇಂದ್ರ ಸರ್ಕಾರವು ತೀರ್ಪು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಹಾಗೆಯೇ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ SC/ST (ದೌರ್ಜನ್ಯ ವಿರೋಧಿ) ತಿದ್ದುಪಡಿ ಕಾಯ್ದೆ 2018 ಅಂಗೀಕರಿಸಲಾಗಿತ್ತು. ಇದು 2018ರ ಮಾರ್ಚ್‌ನ ತೀರ್ಪನ್ನು ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದಾದ ಬೆನ್ನಲ್ಲೇ 2019ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2018ರ ಮಾರ್ಚ್ ತೀರ್ಪಿನ ಮಾರ್ಗದರ್ಶನಗಳನ್ನು ಹಿಂಪಡೆಯಿತು. ಹಾಗೆಯೇ 2020ರ ಫೆಬ್ರವರಿ 10ರಂದು ಸುಪ್ರೀಂ ಕೋರ್ಟ್ 2018ರ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕತೆಯನ್ನು ಎತ್ತಿಹಿಡಿದು, ಬಂಧನ ಮತ್ತು ನಿರೀಕ್ಷಣಾ ಜಾಮೀನು ನಿರಾಕರಣೆಯನ್ನು ಮಾನ್ಯ ಮಾಡಿತು.
ತಡೆ ಆದೇಶಗಳ ಸ್ವಯಂಚಾಲಿತ ರದ್ದತಿ
2018ರಲ್ಲಿ ‘ಏಷ್ಯನ್ ರಿಸರ್ಫೇಸಿಂಗ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಹೈಕೋರ್ಟ್‌ಗಳು ನೀಡಿದ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳ ತಡೆ ಆದೇಶಗಳು ಸ್ವಯಂಚಾಲಿತವಾಗಿ 6 ತಿಂಗಳ ನಂತರ ರದ್ದಾಗುತ್ತವೆ ಎಂದು ಹೇಳಿತ್ತು. ಪ್ರಕರಣಗಳ ವಿಳಂಬವನ್ನು ತಡೆಯುವ ನಿಟ್ಟಿನಲ್ಲಿ ಈ ತೀರ್ಪು ನೀಡಲಾಗಿತ್ತು. ಆದರೆ ಇದು ಹೈಕೋರ್ಟ್‌ಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂಬ ಟೀಕೆಗಳು ಕೇಳಿಬಂದವು.
ಅದಾದ ಬಳಿಕ 2024ರ ಫೆಬ್ರವರಿ 29ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಹೈಕೋರ್ಟ್ ಅಥವಾ ಕೆಳಗಿನ ನ್ಯಾಯಾಲಯಗಳು ನೀಡಿದ ತಡೆ ಆದೇಶಗಳು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಯಾವುದೇ ಅರ್ಜಿಯನ್ನು ವಿಚಾರಣೆ ನಡೆಸದೆ ಮತ್ತು ಎರಡೂ ಪಕ್ಷಗಳ ವಾದ ಆಲಿಸದೆ ತಡೆ ಆದೇಶವನ್ನು ರದ್ದುಗೊಳಿಸುವುದು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿತು. ವಿಳಂಬವನ್ನು ತಡೆಯಲು ನ್ಯಾಯಾಲಯಗಳು ಆದ್ಯತೆ ನೀಡಿ ವಿಚಾರಣೆ ನಡೆಸಬೇಕು ಎಂದು ತಿಳಿಸಿತು.
ಹೀಗೆ ಸಾಮಾನ್ಯವಾಗಿ ಹೆಚ್ಚಾಗಿ ಸಾರ್ವಜನಿಕ ವಲಯದಲ್ಲಿ ತೀರ್ಪಿಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನೇ ಮರುಪರಿಶೀಲನೆ ಮಾಡಿದೆ. ಇದಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ವಿಪಕ್ಷಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯಿಂದಾಗಿ ಸಾರ್ವಜನಿಕವಾಗಿ ಗೊಂದಲಕ್ಕೆ, ಕಳವಳಕ್ಕೆ ಕಾರಣವಾಗಿದ್ದ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆ ನಡೆಸಿದೆ. ಇಂತಹ ಪ್ರಕರಣಗಳಲ್ಲಿ ಇತ್ತೀಚಿನ ಅರಾವಳಿ ತೀರ್ಪಿಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯು ವನ್ಯಜೀವಸಂಕುಲದ ಉಳಿವಿನ, ಪರಿಸರ ವ್ಯವಸ್ಥೆಯ ರಕ್ಷಣೆಯ ದೃಷ್ಟಿಯಿಂದ ಮಹತ್ವಪೂರ್ಣ ಎನಿಸಿಕೊಂಡಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




