ಚುನಾವಣಾ ಹೊಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿದ್ದ ಚುನಾವಣಾ ಅಧಿಕಾರಿಗಳು ಕಚೇರಿ ತೊರೆದು ಓಡಿಹೋಗಿದ್ದಾರೆ. ಜನರು ತಮ್ಮ ಮನೆಗಳು, ಕಚೇರಿಗಳು ಹಾಗೂ ಇತರ ಕಟ್ಟಡಗಳಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ.
ಇಂದು (ಶುಕ್ರವಾರ) ಮಧ್ಯಾಹ್ನ ಕೋಲ್ಕತ್ತಾದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಬಾಂಗ್ಲಾದೇಶದಲ್ಲಿದೆ ಎಂದು ತಿಳಿದುಬಂದಿದೆ. ಭೂಕಂಪನಕ್ಕೂ ಕೆಲವೇ ಕ್ಷಣಗಳ ಮುನ್ನ ಜನರಿಗೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಭೂಕಂಪದ ಎಚ್ಚರಿಕೆಯ ಮಾಹಿತಿಗಳೂ ಬಂದಿವೆ ಎಂದು ಹೇಳಲಾಗಿದೆ.
ಕೋಲ್ಕತ್ತಾದಲ್ಲಿ ಭೂಕಂಪ ಸಂಭವಿಸಿದಾಗ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಭೂಮಿ ನಡುಗಿದ್ದು, ನೆರೆದಿದ್ದವರೂ ಓಡಿದ್ದಾರೆ. ಅನೇಕರು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದ ಹೊರಗೆ ಓಡಿಬಂದು ತೆರೆದ ಪ್ರದೇಶಗಳಲ್ಲಿ ಜಮಾಯಿಸಿದ್ದಾರೆ.
Kolkata, West Bengal: An earthquake of magnitude 5.0 was felt in Kolkata.
— IANS (@ians_india) February 27, 2026
Union MoS Sukanta Majumdar was addressing a gathering when an earthquake struck Kolkata. pic.twitter.com/I1OU6k5SCl
ಭಯಾನಕ ಕ್ಷಣದ ಕುರಿತು ನೆಟ್ಟಿಗರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದು, “ಕೋಲ್ಕತ್ತಾದಲ್ಲಿ ಭೂಕಂಪದಿಂದಾಗಿ ಹಾಸಿಗೆ ನಡುಗುತ್ತಿತ್ತು, ಫ್ಯಾನ್ ತೂಗಾಡುತ್ತಿತ್ತು. ಅದು ಒಂದು ಕ್ಷಣ ಭಯಾನಕವಾಗಿತ್ತು. ಎಲ್ಲರೂ ಸುರಕ್ಷಿತವಾಗಿರುತ್ತಾರೆಂದು ಭಾವಿಸುತ್ತೇನೆ” ಎಂದಿದ್ದಾರೆ.




