ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಎರಡು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಬುಡಕಟ್ಟು ಜನಾಂಗದ ಯುವತಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿ, ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮತ್ತೆ ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಮೈತೇಯಿ-ಕುಕಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ಈ ಹಿಂಸಾಚಾರದ ವೇಳೆಯಲ್ಲೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಕುಕಿ ಬುಡಕಟ್ಟು ಜನಾಂಗದ ಯುವತಿ ಮಾನಸಿಕ ಆಘಾತ ಮತ್ತು ದೈಹಿಕ ಗಾಯಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಇತ್ತೀಚೆಗೆ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರಕ್ಕೆ 2 ವರ್ಷ; ನಿಲ್ಲದ ಸಂಘರ್ಷ
ಮೈತೇಯಿ ಸಮುದಾಯದ ಕೆಲವು ಪುರುಷರ ಗುಂಪು ಈ ಅತ್ಯಾಚಾರ ಎಸಗಿದೆ ಎಂದು ಕುಕಿ ಸಮುದಾಯದ ಆರೋಪವಾಗಿದೆ. ಚುರಾಚಂದ್‌ಪುರ ಮೂಲದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಯುವತಿಯ ನೆನಪಿಗಾಗಿ ರಾತ್ರಿ ವೇಳೆ ಮೇಣದಬತ್ತಿ ಹಿಡಿದು ಜಾಗರಣೆ ಕೂತು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
“ಎಷ್ಟು ಕ್ರೂರವಾಗಿ ಅತ್ಯಾಚಾರ ಎಸಗಿಲಾಗಿತ್ತೆಂದರೆ ಆಕೆ ಬದುಕುಳಿದ್ದಿದ್ದು ಪವಾಡ. ಆಕೆಯ ದೇಹವೆಲ್ಲಾ ತೀವ್ರವಾದ ಗಾಯಗಳಿತ್ತು. ಗರ್ಭಾಶಯದಲ್ಲಿ ಗಂಭೀರ ನೋವಿತ್ತು, ತೊಂದರೆಗಳಾಗುತ್ತಿತ್ತು. ಇವೆಲ್ಲವುದರಿಂದ ಮಾನಸಿಕವಾಗಿ ನೊಂದಿದ್ದಳು. ಆಕೆಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಇತ್ತೀಚೆಗೆ ಜನವರಿ 10ರಂದು ಸಾವನ್ನಪ್ಪಿದ್ದಾಳೆ” ಎಂದು ಐಟಿಎಲ್‌ಎಫ್ ಹೇಳಿದೆ.
ಈ ಬಗ್ಗೆ ನ್ಯೂಸ್‌ಲಾಂಡ್ರಿಗೆ ಪ್ರತಿಕ್ರಿಯಿಸಿರುವ ಯುವತಿಯ ತಾಯಿ, “ನನ್ನ ಮಗಳು ತುಂಬಾ ಉತ್ಸಾಹಭರಿತವಾಗಿದ್ದಳು. ಅವಳಿಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ಸಂಬಂಧಿಕರೊಬ್ಬರೊಂದಿಗೆ ಇಂಫಾಲ್‌ನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಅನೇಕ ಸ್ನೇಹಿತರಿದ್ದರು. ಅಷ್ಟೊಂದು ನಗುಮುಖದ ಹುಡುಗಿ ಅವಳು. ಆದರೆ ಈ ಘಟನೆಯ ನಂತರ ಆಕೆಯ ನಗುವನ್ನು ನಾವು ಕಾಣಲೇ ಇಲ್ಲ” ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
20 ವರ್ಷದ ಯುವತಿಯು ತನ್ನನ್ನು ಕಪ್ಪು ಬಟ್ಟೆ ಧರಿಸಿದ್ದ ನಾಲ್ವರು ಶಸ್ತ್ರಧಾರಿಗಳು ಅಪಹರಣ ಮಾಡಿ, ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಮೂವರು ಒಬ್ಬರಾದ ಬಳಿಕ ಒಬ್ಬರಂತೆ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ಆರೋಪಿಗಳು ಮೈತೇಯಿ ಗುಂಪಿನ ಸದಸ್ಯರಾದ ಅರಾಂಬೈ ಟೆಂಗೋಲ್ ಕಪ್ಪು ಶರ್ಟ್ ಧರಿಸಿದ್ದರು. ಮೀರಾ ಪೈಬಿಯ ಕೆಲವು ಸದಸ್ಯರು ಆಕೆಯನ್ನು ಮೈತೇಯಿ ಪುರುಷರಿಗೆ ಹಸ್ತಾಂತರಿಸಿದ್ದಾರೆ ಎಂದು ಕುಕಿ ಸಂಘಟನೆಗಳು ಆರೋಪಿಸಿವೆ.





