ಹೆದ್ದಾರಿ ಯೋಜನೆಗೆ ಸಂಬಂಧಿಸಿದ ಬೃಹತ್ ಭೂಸ್ವಾಧೀನ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ಅರುಣಾಚಲ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ.
ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ಲಾಡಾದಿಂದ ಸರ್ಲಿ ವರೆಗಿನ ಫ್ರಾಂಟಿಯರ್ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು ಇದು ಚೈನೇಜ್ 0.00 ಕಿ.ಮೀ ನಿಂದ 125.55 ಕಿ.ಮೀ ವರೆಗೆ ಇರಲಿದೆ. ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಆರ್‌ಎಫ್‌ಸಿಟಿಎಲ್‌ಎಆರ್‌ಆರ್ ಕಾಯ್ದೆ-2013ರ ಅಡಿಯಲ್ಲಿ ಯೋಜನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದಾಗ್ಯೂ, ರಸ್ತೆ ಕಾಮಗಾರಿ ಸಂಸ್ಥೆ ತನ್ನ ಅಗತ್ಯಕ್ಕೆ ತಕ್ಕಂತೆ ಸಲ್ಲಿಸಿದ್ದ ಮನವಿ ಪತ್ರದಂತೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಪರಿಹಾರ ನೀಡುವಲ್ಲಿ ಸರಿಯಾದ ಕ್ರಮವನ್ನು ಅನುಸರಿಸಿಲ್ಲ. ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಪರಿಹಾರ ವಿತರಣೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗಿವೆ. ಭೂಸ್ವಾಧೀನದ ವೇಳೆ, ಸ್ವಾಧೀನಕ್ಕೆ ಒಳಪಡುವ ಭೂಮಿ ಮತ್ತು ಆಸ್ತಿಯನ್ನು ನಿರ್ಣಯಿಸಲು ಜಿಲ್ಲಾಡಳಿತವು ಯಾವುದೇ ಭೂ ಸಮೀಕ್ಷೆ ನಡೆಸಿಲ್ಲ. ಜಂಟಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಲಾಗಿಲ್ಲ” ಎಂಬ ಗಂಭೀರ ಆರೋಪಗಳಿವೆ.
“ಪರಿಹಾರದ ಮೊತ್ತದಲ್ಲಿಯೂ ಭಾರೀ ವ್ಯತ್ಯಾಸಗಳು ಕಂಡುಬಂದಿವೆ. ನಿಜವಾದ ಭೂಮಾಲೀಕರು ಮತ್ತು ಪೀಡಿತ ಕುಟುಂಬಗಳನ್ನು ನಿರ್ಣಯಿಸಲಾಗಿಲ್ಲ ಹಾಗೂ ಪರಿಹಾರವನ್ನು ನೀಡಲಾಗಿಲ್ಲ. ಆದರೆ, ಅಸ್ತಿತ್ವದಲ್ಲಿಲ್ಲದ ಆಸ್ತಿಗಳು ಮತ್ತು ವ್ಯಕ್ತಿಗಳಿಗೆ ಅತಿಯಾದ ಮತ್ತು ಅಸಮಾನ ಪರಿಹಾರ ಪಾವತಿ ಮಾಡಲಾಗಿದೆ” ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರಗೀತೆ, ರಾಷ್ಟ್ರಧ್ವಜ ಒಪ್ಪದವರು ದೇಶದ್ರೋಹಿಗಳಲ್ಲವೇ?
ಭೂಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಅನುಮೋದನೆ ನೀಡಿದ ‘ಭೂ ಪರಿಶೀಲನಾ ಮಂಡಳಿ’ಯ ಅಧ್ಯಕ್ಷತೆ ವಹಿಸಿದ್ದ ಉಪ ಆಯುಕ್ತ ಹಿಮಾಂಶು ನಿಗಮ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
“ಭೂಮಾಲೀಕರಿಂದ ಬಂದ ದೂರುಗಳು ಗಂಭೀರ ಸ್ವರೂಪದ್ದಾಗಿದ್ದು, ಭೂ ಸಮೀಕ್ಷೆ ನಡೆಸದೆ ಪರಿಹಾರವನ್ನು ನಿರ್ಣಯಿಸಲಾಗಿದ್ದು, ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ” ಎಂದು ಭೂ ನಿರ್ವಹಣಾ ಇಲಾಖೆ ಕಾರ್ಯದರ್ಶಿ ಎ.ಕೆ. ಸಿಂಗ್ ತಿಳಿಸಿದ್ದಾರೆ.
“ಅವ್ಯವಹಾರದ ಕುರಿತು ತನಿಖೆ ನಡೆಸಲು ಸತ್ಯಶೋಧನಾ ಸಮಿತಿಗೆ (FFC) ಸೂಚಿಸಲಾಗಿತ್ತು. ಸಮಿತಿಯು ತನ್ನ ವರದಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರಂತೆ, FFC ಭೂಮಾಲೀಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸುವ ಮೂಲಕ ತನಿಖೆ ನಡೆಸಿದೆ. ಸಮಿತಿ ಸಲ್ಲಿಸಿದ ಮಧ್ಯಂತರ ವರದಿಯು ಪರಿಶೀಲನಾ ತಂಡದ ಗಂಭೀರ ಲೋಪಗಳು ಮತ್ತು ಮೋಸದ ಮೌಲ್ಯಮಾಪನವನ್ನು ದೃಢಪಡಿಸಿದೆ” ಎಂದು ಸಿಂಗ್ ವಿವರಿಸಿದ್ದಾರೆ.




