ಎಲ್‌ಎಲ್‌ಬಿ (ಕಾನೂನು) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬನನ್ನು ಆತನ ಸಹಪಾಠಿಗಳು ಕಾರಿನಲ್ಲಿ ಕೂಡಿಹಾಕಿಕೊಂಡು, ಸುಮಾರು 50-60 ಬಾರಿ ಕಪಾಳಕ್ಕೆ ಹೊಡೆದು ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಲಖನೌನಲ್ಲಿರುವ ಅಮಿತಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಗಸ್ಟ್ 26ರಂದು ಘಟನೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಿಖರ್ ಮುಖೇಶ್ ಕೇಸರ್ವಾನಿ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ಶಿಖರ್ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತದೆ.
ತರಗತಿಗೆ ಹಾಜರಾಗಲು ಶಿಖರ್ ಅವರು ತಮ್ಮ ಸ್ನೇಹಿತೆ ಸೌಮ್ಯ ಸಿಂಗ್ ಯಾದವ್ ಜೊತೆಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ, ಸಹಪಾಠಿಗಳು ಅವರ ಕಾರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆದರೆ, ಹಲ್ಲೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಘಟನೆ ಬಗ್ಗೆ ವಿಶ್ವವಿದ್ಯಾಲಯ ಕೂಡ ಪ್ರತಿಕ್ರಿಯೆ ನೀಡಿಲ್ಲ.
ಶಿಖರ್ ಅವರ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನ ಮಗನ ಮೇಲೆ ಆತನ ಸಹಪಾಠಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. 50-60 ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ವಿದ್ಯಾರ್ಥಿಗಳಾದ ಆಯುಷ್ ಯಾದವ್, ಜಾಹ್ನವಿ ಮಿಶ್ರಾ, ಮಿಲೇ ಬ್ಯಾನರ್ಜಿ, ವಿವೇಕ್ ಸಿಂಗ್ ಹಾಗೂ ಆರ್ಯಮಾನ್ ಶುಕ್ಲಾ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.




