ಬಿಹಾರದಲ್ಲಿ ಲೋಕೋ ಪೈಲಟ್ ಒಬ್ಬರು ತಮ್ಮ ದೈನಂದಿನ ಪಾಳಿಯ 9 ಗಂಟೆಗಳ ಕೆಲಸ ಮುಗಿದಿದೆ. ಹೆಚ್ಚುವರಿ ಅವಧಿಗೆ ಕೆಲಸ ಮಾಡುವುದಿಲ್ಲವೆಂದು ನಿರ್ಧರಿಸಿದ್ದಾರೆ. ರೈಲು ಚಲಾಯಿಸಲು ನಿರಾಕರಿಸಿದ್ದಾರೆ. ಪರಿಣಾಮ, ಅವರು ಚಲಾಯಿಸುತ್ತಿದ್ದ ರೈಲು ಸುಮಾರು 3 ಗಂಟೆಗಳ ಕಾಲ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
ಬುಧವಾರ, ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಠಾಕೂರ್‌ಗಂಜ್ ರೈಲ್ವೆ ನಿಲ್ದಾಣಕ್ಕೆ ರೈಲು ಚಲಾಯಿಸಿಕೊಂಡು ಬಂದ ಲೋಕೋ ಪೈಲಟ್, ತಮ್ಮ ಕೆಲಸದ ಅವಧಿ ಮುಗಿಯುತ್ತಿದ್ದಂತೆ, ರೈಲನ್ನು ಮುಂದೆ ಚಲಾಯಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಲ್ಡಾದಿಂದ ಸಿಲಿಗುರಿಗೆ ಪ್ರಯಾಣಿಸುತ್ತಿದ್ದ ಡೆಮು (ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲು, ಮಧ್ಯಾಹ್ನ 2:52ಕ್ಕೆ ಠಾಕೂರ್‌ಗಂಜ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ತಲುಪಿತು. ಆದರೆ, ರೈಲು ಮುಂದೆ ಚಲಿಸುವ ಬದಲು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ನಿಂತಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದರು.
ರೈಲು ಚಲಾಯಿಸಲು ನಿರಾಕರಿಸಿದ ಲೋಕೋ ಪೈಲಟ್, “ನನ್ನ ಕೆಲಸದ ಅವಧಿ ಮುಗಿದಿದೆ. ರೈಲ್ವೇ ಮಾರ್ಗಸೂಚಿಗಳ ಅಡಿಯಲ್ಲಿ ನಿಗದಿಪಡಿಸಿದ ಸಮಯ ಮಿತಿಗಿಂತ ಹೆಚ್ಚು ಸಮಯ ರೈಲನ್ನು ಚಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್‌ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…
ರೈಲ್ವೆ ಮಾರ್ಗಸೂಚಿಗಳ ಪ್ರಕಾರ, ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಲೋಕೋ ಪೈಲಟ್ ಸತತವಾಗಿ 9-10 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬಹುದು. ಅದಕ್ಕಿಂತ ಹೆಚ್ಚುವರಿ ಕೆಲಸ ಮಾಡಬಾರದು ಎಂದು ಹೇಳುತ್ತದೆ. ಈ ನಿಯಮಗಳನ್ನು ಉಲ್ಲೇಖಿಸಿ, ಅಗತ್ಯ ವಿಶ್ರಾಂತಿ ಇಲ್ಲದೆ ಕೆಲಸ ಮುಂದುವರಿಸುವುದಿಲ್ಲವೆಂದು ಲೋಕೋ ಪೈಲಟ್ ಹೇಳಿಕೊಂಡಿದ್ದಾರೆ.
ರೈಲಿನಲ್ಲಿ ಸಿಲಿಗುರಿ, ಕಿಶನ್‌ಗಂಜ್ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪ್ರಯಾಣಿಸುತ್ತಿದ್ದ ನೂರಾರು ವ್ಯಾಪಾರಿಗಳು, ಕಾರ್ಮಿಕರು ಹಾಗೂ ಕುಟುಂಬಗಳು ಇದ್ದವು. ಪರಿಸ್ಥಿತಿ ತಿಳಿಯಾಗುವವರೆಗೆ ಕಾಯಬೇಕಾಗಿ ಬಂದಿದ್ದರಿಂದ ದೀರ್ಘಕಾಲದ ವಿಳಂಬವು ಅನೇಕ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.




