ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ, ಗ್ರಾಮೀಣ ಭಾಗದಲ್ಲಿ ವಾರ್ಷಿಕ 125 ದಿನಗಳ ಉದ್ಯೋಗ ಭರವಸೆ ನೀಡುವ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) – (ವಿಬಿ-ಜಿ ರಾಮ್ ಜಿ)’ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ವಿರೋಧ ಪಕ್ಷಗಳ ಸದಸ್ಯರ ತೀವ್ರ ಗದ್ದಲ, ಘೋಷಣೆ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಹಾಕುವ ಪ್ರತಿಭಟನೆಯ ನಡುವೆಯೇ ಈ ಮಹತ್ವದ ಮಸೂದೆಗೆ ಧ್ವನಿಮತದ ಮೂಲಕ ಒಪ್ಪಿಗೆ ಸೂಚಿಸಲಾಯಿತು.
ಸುಮಾರು ಎರಡು ದಶಕಗಳಷ್ಟು ಹಳೆಯದಾದ ನರೇಗಾ ಯೋಜನೆಯ ಬದಲಿಗೆ ಜಾರಿಗೆ ಬರಲಿರುವ ಈ ನೂತನ ಮಸೂದೆಯು, ಗ್ರಾಮೀಣ ಜನರಿಗೆ ವರ್ಷಕ್ಕೆ ಕನಿಷ್ಠ 125 ದಿನಗಳ ಕೆಲಸವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಸದನದಲ್ಲಿ ಕೋಲಾಹಲ
ಸುಮಾರು ಎಂಟು ಗಂಟೆಗಳ ದೀರ್ಘ ಚರ್ಚೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉತ್ತರ ನೀಡಲು ಮುಂದಾದರು. ಈ ವೇಳೆ ವಿರೋಧ ಪಕ್ಷದ ಸಂಸದರು, “ನಮಗೆ ನರೇಗಾ ಬೇಕು” ಎಂಬ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕೆಲ ಸದಸ್ಯರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?
ಗಾಂಧಿ ಆದರ್ಶಗಳ ರಕ್ಷಣೆ: ಕೃಷಿ ಸಚಿವ
ವಿಪಕ್ಷಗಳ ಗದ್ದಲದ ನಡುವೆಯೇ ಮಾತನಾಡಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಎತ್ತಿಹಿಡಿದಿದೆ ಎಂದು ಪ್ರತಿಪಾದಿಸಿದರು.
”ಕಾಂಗ್ರೆಸ್ ಬಾಪು ಅವರ ಆದರ್ಶಗಳನ್ನು ಕೊಂದಿದೆ. ಆದರೆ ನಮ್ಮ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಕ್ಕಾ ಮನೆ), ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್ ಮತ್ತು ಆಯುಷ್ಮಾನ್ ಭಾರತ್‌ನಂತಹ ಕಲ್ಯಾಣ ಯೋಜನೆಗಳ ಮೂಲಕ ಗಾಂಧೀಜಿಯವರ ತತ್ತ್ವಗಳನ್ನು ಜೀವಂತವಾಗಿರಿಸಿದೆ” ಎಂದು ಹೇಳಿದರು.
ಅಂತಿಮವಾಗಿ ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆಯೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಬಳಿಕ ಲೋಕಸಭೆಯ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.





