ಲೋಕಸಭೆಯಲ್ಲಿ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವದ ಕುರಿತು ಡಿಸೆಂಬರ್ 8ರ ಸೋಮವಾರ ಮತ್ತು ಚುನಾವಣಾ ಸುಧಾರಣೆಗಳ ಕುರಿತು ಡಿಸೆಂಬರ್ 9ರ ಮಂಗಳವಾರ ಚರ್ಚೆ ನಡೆಸಲು ನಿರ್ಧಾರವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆ ಮತ್ತು ವ್ಯವಹಾರ ಸಲಹಾ ಸಮಿತಿ (BAC) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
“ಸ್ಪೀಕರ್ ಅವರು ನಡೆಸಿದ ಸರ್ವಪಕ್ಷ ಸಭೆಯಲ್ಲಿ ಡಿಸೆಂಬರ್ 8ರ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ವಂದೇ ಮಾತರಂನ 150ನೇ ವಾರ್ಷಿಕೋತ್ಸವ ಚರ್ಚೆ ಮತ್ತು ಡಿಸೆಂಬರ್ 9ರ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಚುನಾವಣಾ ಸುಧಾರಣೆಗಳ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ರಿಜಿಜು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ಕಾಂಗ್ರೆಸ್ ಮುಖ್ಯ ಸಚೇತಕ ಕೆ. ಸುರೇಶ್, ಎಸ್‌ಐಆರ್ ವಿಷಯವನ್ನು ಚುನಾವಣಾ ಸುಧಾರಣೆಗಳ ಚರ್ಚೆಯಡಿಯಲ್ಲಿ ಸೇರಿಸಲಾಗಿದೆ. ಸೋಮವಾರ ವಂದೇ ಮಾತರಂ ಮತ್ತು ಮಂಗಳವಾರ-ಬುಧವಾರ ಚುನಾವಣಾ ಸುಧಾರಣೆಗಳ ಮೇಲೆ ಚರ್ಚೆ ನಡೆಯಲಿದೆ. ಎರಡೂ ವಿಷಯಗಳಿಗೆ ತಲಾ 10 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಅಗತ್ಯ ಬಿದ್ದರೆ ಹೆಚ್ಚಿಸಬಹುದು ಎಂದಿದ್ದಾರೆ.
ವಿಪಕ್ಷಗಳು ಎಸ್‌ಐಆರ್ ಕುರಿತು ತಕ್ಷಣ ಚರ್ಚೆಗೆ ಆಗ್ರಹಿಸಿ ಸತತ ಎರಡು ದಿನಗಳಿಂದ ಸದನವನ್ನು ಅಡ್ಡಿಪಡಿಸಿದ್ದವು. ಆದರೆ ಸರ್ಕಾರ ಈ ವಿಷಯ ಚುನಾವಣಾ ಆಯೋಗದ ಆಡಳಿತಾತ್ಮಕ ವಿಚಾರವೆಂದು, ಅದರ ಮೇಲೆ ಚರ್ಚೆ ಸಾಧ್ಯವಿಲ್ಲ ಎಂದಿತ್ತು. ಆದರೆ ಚುನಾವಣಾ ಸುಧಾರಣೆಗಳ ಮೇಲೆ ವಿಸ್ತೃತ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದೆ.





