ಕಳೆದ ಆರು ತಿಂಗಳಿನಿಂದ ಸತತವಾಗಿ ಊರು ತೊರೆದು ಮದುವೆಯಾಗುವುದು, ಅಂತರ್ಜಾತಿ ವಿವಾಹಗಳು ಹಾಗೂ ಪ್ರೇಮ ವಿವಾಹಗಳು ಎಚ್ಚಾಗಿವೆ. ಇನ್ನು ಮುಂದೆ, ಕುಟುಂಬದ ಒಪ್ಪಿಗೆ ಇಲ್ಲದ ಪ್ರೇಮ ವಿವಾಹಗಳು ನಡೆದರೆ, ಅವರ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ ಎಂದು ಗ್ರಾಮ ಪಂಚಾಯತಿಯೊಂದು ಬೆದರಿಕೆ ಹಾಕಿದೆ. ಪಂಚಾಯತಿಯ ಬೆದರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಪಂಚೇವಾ ಗ್ರಾಮ ಪಂಚಾಯತಿಯು ಇಂತಹದ್ದೊಂದು ಬೆದರಿಕೆಯನ್ನು ಘೋಷಿಸಿದೆ. ಕಳೆದ ಆರು ತಿಂಗಳಲ್ಲಿ 10ಕ್ಕೂ ಹೆಚ್ಚು ಜೋಡಿಗಳು ಕುಟುಂಬದ ಒಪ್ಪಿಗೆಯಿಲ್ಲದೆ ವಿವಾಹವಾಗಿದ್ದಾರೆ. ಅವರಲ್ಲಿ ಹಲವರು, ಪೊಲೀಸ್ ಠಾಣೆಗಳಲ್ಲಿ ಮತ್ತು ನ್ಯಾಯಾಧೀಶರ ಎದುರು ತಮ್ಮ ಹೆತ್ತವರನ್ನು ಗುರುತಿಸಲೂ ನಿರಾಕರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ, ಗ್ರಾಮದ ಹಿರಿಯರು, ಪಂಚಾಯತಿ ಸದಸ್ಯರು ಹಾಗೂ ನಿವಾಸಿಗಳು ಸಭೆ ನಡೆಸಿದ್ದು, ಊರು ತೊರೆದ ಪ್ರೇಮಿಗಳ ಕುಟುಂಬಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನಿರ್ಬಂಧ ಹೇರುವುದಾಗಿ ಘೋಷಿಸಿದ್ದಾರೆ.
ಆ ಸಭೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವುಗಳಲ್ಲಿ; ಗ್ರಾಮಸ್ಥರು ನಿರ್ಣಯ ಪತ್ರವನ್ನು ಹಿಡಿದು, ಗ್ರಾಮದ ಸರ್ವಾನುಮತದ ನಿರ್ಧಾರವೆಂದು ಓದುವುದು ಕಂಡುಬಂದಿದೆ.
“ಊರು ತೊರೆದು ಮದುವೆಯಾದ ಯಾವುದೇ ಹುಡುಗ ಅಥವಾ ಹುಡುಗಿ ಹಾಗೂ ಅವರ ಕುಟುಂಬಗಳು ಈ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಕುಟುಂಬಗಳಿಗೆ ಹಾಲು ಅಥವಾ ಯಾವುದೇ ಸರಕುಗಳನ್ನು ಪೂರೈಸಲಾಗುವುದಿಲ್ಲ. ಯಾರೂ ಅವರನ್ನು ಸಾಮಾಜಿಕ ಅಥವಾ ಕುಟುಂಬ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ. ಗ್ರಾಮದಲ್ಲಿ ಅವರಿಗೆ ಯಾವುದೇ ಕೆಲಸವನ್ನು ನೀಡಲಾಗುವುದಿಲ್ಲ. ಪುರೋಹಿತರು, ಕ್ಷೌರಿಕರು ಹಾಗೂ ಇತರ ಸೇವಾ ಪೂರೈಕೆದಾರರು ಆ ಕುಟುಂಬಗಳ ಮನೆಗಳಿಗೆ ಹೋಗುವುದಿಲ್ಲ” ಎಂದು ನಿರ್ಣಯದಲ್ಲಿ ಹೇಳಲಾಗಿದೆ.
“ಊರು ತೊರೆದು ವಿವಾಹವಾದ ದಂಪತಿಗೆ ಸಹಾಯ ಮಾಡುವ, ಅವರಿಗೆ ಆಶ್ರಯ ನೀಡುವ, ಮದುವೆಗೆ ಸಾಕ್ಷಿಯಾಗುವ ಅಥವಾ ಅವರಿಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡುವ ಯಾರನ್ನೂ ಸಹ ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದು” ಎಂದು ಬೆದರಿಕೆ ಹಾಕಲಾಗಿದೆ.
ವೀಡಿಯೊಗಳು ವೈರಲ್ ಆದ ನಂತರ, ಸ್ಥಳೀಯ ಆಡಳಿತದ ಅಧಿಕಾರಿಗಳು ಪಂಚೆವಾ ಗ್ರಾಮಕ್ಕೆ ಭೇಟಿ ನೀಡಿದ್ದು, ಸರಪಂಚ್ ಸಮ್ಮುಖದಲ್ಲಿ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲಿನಿ ಶ್ರೀವಾಸ್ತವ ಅವರು ಜೌರಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಈ ವಿಷಯವನ್ನು ಪರಿಶೀಲಿಸುವಂತೆ ನಿರ್ದೇಶಿಸಿದ್ದಾರೆ.
“ಗ್ರಾಮಸ್ಥರು ಬಿಡುಗಡೆ ಮಾಡಿದ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ದೂರು ಬಂದ ಕೂಡಲೇ ಈ ವಿಷಯವನ್ನು ಪರಿಶೀಲಿಸಲು ಮತ್ತು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿವಾಸಿಗಳೊಂದಿಗೆ ಮಾತನಾಡಲು ಸ್ಥಳೀಯ ಆಡಳಿತವನ್ನು ಗ್ರಾಮಕ್ಕೆ ಕಳುಹಿಸಲಾಗಿದೆ” ಎಂದು ರತ್ಲಂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.




