ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಬಂಧ ಬೆಳೆಸಿದ್ದ ದುರುಳನೊಬ್ಬ, ಗರ್ಭಿಣಿಯಾಗಿದ್ದ ಯುವತಿಯನ್ನು ಕೊಲೆಗೈದಿರುವ ಘಟನೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ರಾಜೇಶ್ ಎಂಬಾತ ಅದೇ ಗ್ರಾಮದ ಯುವತಿಯನ್ನು ಸುಮಾರು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ಆಕೆ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದಳು. ಯುವತಿ 18 ವರ್ಷ ವಯಸ್ಸು ಪೂರೈಸಿದ ನಂತರ, ತನ್ನನ್ನು ಮದುವೆಯಾಗುವಂತೆ ರಾಜೇಶ್ ನನ್ನು ಕೇಳಿದ್ದಾಳೆ. ಅಲ್ಲದೇ ಮದುವೆಯಾಗದಿದ್ದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾಳೆ ಎಂದು ವರದಿಯಾಗಿದೆ.
ಮದುವೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದಿ, ರಾಜೇಶ್ ಮತ್ತು ಆತನ ಸ್ನೇಹಿತ ರಾಹುಲ್ ಸೇರಿ, ಕೊಲೆಗೆ ಸಂಚುಹೂಡಿದ್ದಾರೆ. ಮದುವೆಯಾಗುವುದಾಗಿ ಹೇಳಿ ಯುವತಿಯನ್ನು ಕರೆಸಿಕೊಂಡು, ಆಕೆಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ನಾಪತ್ತೆಯಾಗುತ್ತಿದ್ದಂತೆಯೇ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ವೇಳೆ ಆರೋಪಿ ರಾಜೇಶ್ ತಾನೆೇ ಕೊಲೆ ಮಾಡಿತ್ತು ಎಂದು ಸತ್ಯ ಒಪ್ಪಿಕೊಂಡಿದ್ದಾನೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಕರೆಸಿ, ಹುಡುಕಾಟ ನಡೆಸಿದ್ದು, ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




