ಬಂಗಾಳಕೊಲ್ಲಿಯಲ್ಲಿ ಭಾರೀ ವಾಯುಭಾರ ಕುಸಿತ ಸಂಭವಿಸಿದ್ದು, ಚಂಡಮಾರುತ ಬೀಸುತ್ತಿದೆ. ಶನಿವಾರ, ಮಾರುತವು ಉತ್ತರ ಶ್ರೀಲಂಕಾದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಣಾಮ, ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗದ್ದು, ಕರ್ನಾಟಕದಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ಹೇಳುವಂತೆ; ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ತಿರುವಲ್ಲೂರು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಅರಿಯಲೂರು, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.
ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳು ವರ್ಷದ ಮೊದಲ ಮಳೆ ಕಾಣುವ ನಿರೀಕ್ಷೆಯಿದೆ.
ಹವಾಮಾನ ಇಲಾಖೆಯು ವರದಿ ಮಾಡಿದಂತೆ, ವಾಯುಭಾರ ಕುಸಿತದಿಂದಾಗಿ ಶ್ರೀಲಂಕಾದ ಕರಾವಳಿಯಿಂದ ಸುಮಾರು 100 ಕಿ.ಮೀ ಮತ್ತು ಚೆನ್ನೈನಿಂದ ಸುಮಾರು 550 ಕಿ.ಮೀ ದೂರದಲ್ಲಿ ಚಂಡಮಾರುತ ಬೀಸುತ್ತಿದೆ. ಶನಿವಾರ ಸಂಜೆ ವೇಳೆಗೆ ಶ್ರೀಲಂಕಾ ಮತ್ತು ತಮಿಳುನಾಡಿನ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ರಾಮನಾಥಪುರದ ತಿರುವಾದನೈ, ಆಯಿಂಕುಡಿ (ಪುದುಕೊಟ್ಟೈ), ಗ್ರ್ಯಾಂಡ್ ಅನಿಕಟ್ (ತಂಜಾವೂರು) ಕಳೆದ 24 ಗಂಟೆಗಳಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ತಮಿಳುನಾಡು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣವಿದೆ.




