ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳನ್ನು ಮಾತ್ರವೇ ಸರಬರಾಜು ಮಾಡಲಾಗುತ್ತಿದೆ. ಆದರೆ, ಈ ಸಿಲಿಂಡರ್‌ಗಳ ಬುಕಿಂಗ್ ಮತ್ತು ಡೆಲಿವರಿ ನಡುವಿನ ಅವಧಿ 21 ದಿನಗಳನ್ನು ಮೀರಿದೆ. ಹೀಗಾಗಿ, ಜನರು ಎಲ್‌ಪಿಜಿ ಬಳಕೆ ಬದಲಾಗಿ, ಪರ್ಯಾಯ ಮಾರ್ಗದತ್ತ ಮುಖ ಮಾಡಿದ್ದಾರೆ. ಇಂಡಕ್ಷನ್ ಸ್ಟವ್ ಸೇರಿದಂತೆ ಎಲೆಕ್ಟ್ರಿಕ್ ಕುಕ್ಕಿಂಗ್ ಉಪಕರಣಗಳನ್ನು ಖರೀಸುತ್ತಿದ್ದಾರೆ. ಇದೀಗ, ಈ ಉಪರಣಗಳೂ ಹೆಚ್ಚುತ್ತಿರುವ ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವುದು ಎದ್ದುಕಾಡುತ್ತಿದೆ.
ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್‌ಟಾಪ್‌ಗಳು, ಇಂಡಕ್ಷನ್ ಸ್ಟೌವ್‌ಗಳು ಮತ್ತು ಅವುಗಳಿಗೆ ಬಳಸುವ ವಿಶೇಷ ಪಾತ್ರೆಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಬಹುದು ಎಂಬ ಭೀತಿಯಿಂದಾಗಿ ಕುಟುಂಬಗಳು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿವೆ.
“ಹಿಂದೆ ಕೇವಲ ಹೋಟೆಲ್ ಅಥವಾ ಹಾಸ್ಟೆಲ್‌ಗಳವರು ಇಂತಹ ಉಪಕರಣಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಸಾಮಾನ್ಯ ಕುಟುಂಬಗಳೇ ಹೆಚ್ಚಾಗಿ ಬರುತ್ತಿದ್ದಾರೆ. ಕೇವಲ ಒಂದೇ ದಿನದಲ್ಲಿ 200ಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿದ್ದು, ನೂರಾರು ಮಂದಿ ಫೋನ್ ಕರೆ ಮೂಲಕ ವಿಚಾರಿಸುತ್ತಿದ್ದಾರೆ,” ಎಂದು ದೆಹಲಿಯ ಕನ್ನಾಟ್ ಪ್ಲೇಸ್‌ನ ಪ್ರಮುಖ ವ್ಯಾಪಾರಿ ಅಮಿತ್ ಗುಪ್ತಾ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಇಂಡಕ್ಷನ್ ಸ್ಟೌವ್‌ಗಳಿಗೆ ವಿಪರೀತ ಬೇಡಿಕೆ ಇರುವುದರಿಂದ ಹಲವು ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ವ್ಯಾಪಾರಿಗಳು ವಿವಿಧ ಬ್ರಾಂಡ್‌ಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ಆನ್‌ಲೈನ್ ಖರೀದಿ ವೇದಿಕೆಗಳಲ್ಲಿಯೂ ‘ಔಟ್ ಆಫ್ ಸ್ಟಾಕ್’ ಎಂಬ ಸಾಲುಗಳು ಹೆಚ್ಚಾಗಿ ಕಂಡುಬರುತ್ತಿವೆ.




