ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ನಡುವೆಯೇ, ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ನೀಡಿರುವ ವಿನಾಯಿತಿ ಕುರಿತಂತೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ‘ರಾಜಿ’ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, “ಯಾವುದೇ ರಾಷ್ಟ್ರದ ಅಡಿಪಾಯ ಅದರ ಇಂಧನ ಭದ್ರತೆಯಾಗಿದೆ. ನಾವು ಯಾರಿಂದ ತೈಲ ಅಥವಾ ಅನಿಲ ಖರೀದಿಸಬೇಕು ಮತ್ತು ರಷ್ಯಾದಿಂದ ತೈಲ ಖರೀದಿಸಬಹುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಅಮೆರಿಕಕ್ಕೆ ಅವಕಾಶ ನೀಡಲಾಗಿದೆ. ವಿವಿಧ ತೈಲ ಪೂರೈಕೆದಾರರೊಂದಿಗಿನ ನಮ್ಮ ಸಂಬಂಧವನ್ನು ನಾವೇ ನಿರ್ಧರಿಸಬೇಕು. ಭಾರತದಂತಹ ದೊಡ್ಡ ರಾಷ್ಟ್ರವು, ರಷ್ಯಾದ ತೈಲವನ್ನು ಖರೀದಿಸಲು ಬೇರೊಂದು ರಾಷ್ಟ್ರದ ಅಧ್ಯಕ್ಷರ ಅನುಮತಿಯನ್ನು ಏಕೆ ಪಡೆಯಬೇಕು?” ಎಂದು ಪ್ರಶ್ನಿಸಿದರು.
ತಮ್ಮ ದಾಳಿಯನ್ನು ಮುಂದುವರಿಸಿದ ರಾಹುಲ್, “ನಾನು ಈ ರಹಸ್ಯವನ್ನು ಭೇದಿಸಿದ್ದೇನೆ, ಇದು ಒಂದು ರೀತಿಯ ‘ರಾಜಿ’ಯಾಗಿದೆ. ಇಲ್ಲಿ ಕುಳಿತಿರುವ ತೈಲ ಸಚಿವರೇ ಇದಕ್ಕೆ ಕಾರಣ” ಎಂದರು. ತೈಲ ಖರೀದಿ ನೀತಿಯಲ್ಲಿನ ಹೊಂದಾಣಿಕೆಗೆ ಪುರಿ ಅವರಿಗೆ ‘ಜೆಫ್ರಿ ಎಪ್ಸ್ಟೀನ್’ ಜೊತೆಗಿದೆ ಎನ್ನಲಾದ ಸಂಪರ್ಕವೇ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದರು.
ರಾಹುಲ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ, “ಆಧುನಿಕ ಇಂಧನ ಇತಿಹಾಸದಲ್ಲಿ ಜಗತ್ತು ಇಂತಹ ಬಿಕ್ಕಟ್ಟನ್ನು ಎಂದೂ ಎದುರಿಸಿಲ್ಲ. ಭಾರತದ ಕಚ್ಚಾ ತೈಲ ಪೂರೈಕೆ ಸುಭದ್ರವಾಗಿದೆ. ಈ ಬಿಕ್ಕಟ್ಟಿಗೂ ಮೊದಲು, ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇ 45ರಷ್ಟು ಪಾಲು ಹಾರ್ಮುಜ್ ಜಲಸಂಧಿ ಮೂಲಕ ಸಾಗಾಣಿಕೆಯಾಗುತ್ತಿತ್ತು. ಪ್ರಧಾನಮಂತ್ರಿಯವರ ಅತ್ಯುತ್ತಮ ರಾಜತಾಂತ್ರಿಕ ಸಂಪರ್ಕದಿಂದಾಗಿ, ಹಾರ್ಮುಜ್ ಜಲಸಂಧಿ ಅಡ್ಡಿಯಾಗಿದ್ದರೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಭಾರತ ಈಗ ಸುರಕ್ಷಿತವಾಗಿ ಪಡೆದುಕೊಂಡಿದೆ” ಎಂದು ಸಮರ್ಥಿಸಿಕೊಂಡರು.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
ಲೋಕಸಭೆಯಲ್ಲಿ ಜೆಫ್ರಿ ಎಪ್ಸ್ಟೀನ್ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು, ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಯಿತು. ನಿನ್ನೆಯಷ್ಟೇ ಅವಿಶ್ವಾಸ ನಿರ್ಣಯವನ್ನು ಎದುರಿಸಿ ಪಾರಾಗಿದ್ದ ಸ್ಪೀಕರ್ ಓಂ ಬಿರ್ಲಾ ಅವರು, ರಾಹುಲ್ ಗಾಂಧಿ ಅವರಿಗೆ ತಾವು ನೀಡಿದ ನೋಟಿಸ್‌ಗೆ ಅನುಗುಣವಾಗಿ ಮಾತ್ರ ಮಾತನಾಡುವಂತೆ ಸೂಚಿಸಿ, ಅವರ ಮಾತುಗಳನ್ನು ಮೊಟಕುಗೊಳಿಸಿದರು. ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಕೆಲಕಾಲ ಮುಂದೂಡಲಾಯಿತು.
ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ
ದೇಶಾದ್ಯಂತ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಜನರಿಗೆ ಆತಂಕಪಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಅವರು “ಸಂಪೂರ್ಣವಾಗಿ ವಿಭಿನ್ನ ಕಾರಣಗಳಿಗಾಗಿ” ತಾವೇ ಆತಂಕಕ್ಕೊಳಗಾಗಿದ್ದಾರೆ ಎಂದು ಟೀಕಿಸಿದರು. “ಅಮೆರಿಕದಲ್ಲಿನ ಅದಾನಿ ಪ್ರಕರಣ ಮತ್ತು ಎಪ್ಸ್ಟೀನ್ ಕಡತಗಳ ವಿಷಯದಿಂದಾಗಿ ಪ್ರಧಾನಿ ಆತಂಕಗೊಂಡಿದ್ದಾರೆ” ಎಂದು ರಾಹುಲ್ ಆರೋಪಿಸಿದರು.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯನ್ನು ಖಂಡಿಸಿ, ಸರ್ಕಾರದಿಂದ ಉತ್ತರ ಕೋರಿ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ಹಲವು ವಿರೋಧ ಪಕ್ಷದ ಸಂಸದರು, ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಂಸತ್ ಭವನದ ‘ಮಕರ ದ್ವಾರ’ದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರು ‘ನಾಮ್ ನರೇಂದರ್, ಕಾಮ್ ಸರೆಂಡರ್’ ಮತ್ತು ‘ಮೋದಿ ಜಿ, ಎಲ್‌ಪಿಜಿ’ ಮುಂತಾದ ಘೋಷಣೆಗಳನ್ನು ಕೂಗಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ಮಹಿಳಾ ಸಂಸದರು ಇಟ್ಟಿಗೆಯ ಒಲೆಯ ಮಾದರಿಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಭಾರತದ ಮೇಲಿನ ಅದರ ಪ್ರಭಾವದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ.
”ನಿನ್ನೆಯ ಕಲಾಪದಲ್ಲಿ ಪ್ರಧಾನಿಯವರ ಕುರ್ಚಿ ಖಾಲಿ ಇತ್ತು. ಅವರು ಸದನದೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದೇಶದ ಜನರಿಗೆ ಭಯಪಡಬೇಡಿ ಎಂದು ಹೇಳುವ ಅವರೇ ಭಯಭೀತರಾಗಿದ್ದಾರೆ” ಎಂದು ರಾಹುಲ್ ವರದಿಗಾರರ ಮುಂದೆ ಲೇವಡಿ ಮಾಡಿದರು.





