ಕೋಲ್ಕತ್ತಾದಲ್ಲಿರುವ ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಲಿಫ್ಟ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾರೆ. ಆತನ ಶ್ವಾಸಕೋಶ, ಹೃದಯ ಹಾಗೂ ಲಿವರ್ ಛಿದ್ರಗೊಂಡಿವೆ ಎಂಬುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕಂಡುಬಂದಿದೆ.
ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ. ಅರೂಪ್ ಬಂಡೋಪಾಧ್ಯಯ ಅವರು ಆಸ್ಪತ್ರೆಯ ಟ್ರಾಮಾ ಕೇರ್ ಯೂನಿಟ್‌ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ತನ್ನನ್ನು ಭೇಟಿ ಮಾಡಲು ಬಂದ ತನ್ನ ತಂದೆ ಅಮಲ್ ಬಂಡೋಪಾಧ್ಯಾಯ ಅವರನ್ನು ತನ್ನ ವಾರ್ಡ್‌ಗೆ ಕರೆತರಲು ಅರೂಪ್ ಲಿಫ್ಟ್‌ನಲ್ಲಿ ಹೋಗಿದ್ದಾರೆ. ಈ ವೇಳೆ, ಅವರು ಲಿಫ್ಟ್‌ನ ತಾಂತ್ರಿಕ ದೋಷದಿಂದಾಗಿ ಲಿಫ್ಟ್‌ನಲ್ಲಿಯೇ ಸಿಲುಕಿಕೊಂಡಿದ್ದಾರೆ. ಸುಮಾರು ಒಂದು ಗಂಟೆಯ ಬಳಿಕ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಅರೂಪ್ ಲಿಫ್ಟ್‌ನ ಮಧ್ಯದಲ್ಲಿ ಸಿಲುಕಿಕೊಂಡಿದ್ದಾಗ ಯಾವುದೇ ಲಿಫ್ಟ್ ಆಪರೇಟರ್ ಸ್ಥಳದಲ್ಲಿ ಇರಲಿಲ್ಲ. ಪರಿಣಾಮ, ಸ್ಥಗಿತಗೊಂಡಿದ್ದ ಲಿಫ್ಟ್‌ಅನ್ನು ಸರಿಪಡಿಸಲು ಯಾವುದೇ ಆಸ್ಪತ್ರೆ ಸಿಬ್ಬಂದಿ ಅಥವಾ ಆಪರೇಟರ್ ಲಭ್ಯವಿರಲಿಲ್ಲ ಎಂದು ಆರೋಪಿಸಲಾಗಿದೆ.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆತನ ಪಕ್ಕೆಲುಬು, ಕೈ ಮತ್ತು ಕಾಲಿನ ಮೂಳೆಗಳು ಮುರಿದಿವೆ. ಶ್ವಾಸಕೋಶ, ಹೃದಯ ಹಾಗೂ ಲಿವರ್ ಛಿದ್ರಗೊಂಡಿವೆಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.
ಮೃತನ ತಂದೆ, ಅಮಲ್ ಬಂಡೋಪಾಧ್ಯಯ ನೀಡಿದ ದೂರಿನ ಆಧಾರದ ಮೇಲೆ ತಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ಐವರು ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವರ್ಣರಂಜಿತ ಹಾರ್ಮುಜ್ ಪರ್ವತದ ಕಥನ ಗೊತ್ತೇ?
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸಪ್ತರ್ಷಿ ಚಟ್ಟೋಪಾಧ್ಯಾಯ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅರೂಪ್ ಗಾಯಗೊಂಡಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಲಿಫ್ಟ್ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಬಟನ್ ಒತ್ತಿದ ನಂತರ ಅದು ಮೇಲೆ ಮತ್ತು ಕೆಳಗೆ ಚಲಿಸಿದೆ. ಇದರಿಂದ ಒಳಗಿದ್ದವರು ಗಾಬರಿಗೊಂಡಿದ್ದಾರೆ. ಸಂತ್ರಸ್ತನ ಕುಟುಂಬದವರ ಪ್ರಕಾರ, ಲಿಫ್ಟ್ ಒಂದು ಸ್ಥಳದಲ್ಲಿ ನಿಂತಾಗ ಒಳಗಿದ್ದ ಮೂವರು ಹೊರಬರಲು ಪ್ರಯತ್ನಿಸಿದ್ದಾರೆ. ಆದರೆ, ಲಿಫ್ಟ್‌ನ ಹೊರಗೆ ಕೊಲ್ಯಾಪ್ಸಿಬಲ್ ಗೇಟ್ ಇತ್ತು. ಸಂತ್ರಸ್ತನು ಹೊರಬರಲು ಪ್ರಯತ್ನಿಸುತ್ತಿದ್ದಾಗಲೇ ಲಿಫ್ಟ್ ಮತ್ತೆ ಮೇಲಕ್ಕೆ ಚಲಿಸಲು ಪ್ರಾರಂಭಿಸಿದೆ. ಆ ಸಮಯದಲ್ಲಿ ಅರೂಪ್ ಲಿಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಲಿಫ್ಟ್ ಆಪರೇಟರ್ ಅಥವಾ ಯಾವುದೇ ಸಹಾಯಕ ಸಿಬ್ಬಂದಿ ಇಲ್ಲದಿರುವುದು ಆಡಳಿತಾತ್ಮಕ ಲೋಪ ಎಂಬುದನ್ನು ನಾವು ತಪ್ಪಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು 2024ರ ಆಗಸ್ಟ್‌ನಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ನಂತರ ಆಸ್ಪತ್ರೆಯಲ್ಲಿ ನಡೆದ ಭಾರಿ ಆರ್ಥಿಕ ಅಕ್ರಮಗಳ ಬಗ್ಗೆಯೂ ತನಿಖೆ ಆರಂಭವಾಗಿತ್ತು. ಸಂತ್ರಸ್ತ ವೈದ್ಯೆಗೆ ಈ ಆರ್ಥಿಕ ಅಕ್ರಮಗಳ ಬಗ್ಗೆ ಮಾಹಿತಿ ತಿಳಿದಿದ್ದರಿಂದಲೇ ಈ ಘೋರ ಕೃತ್ಯ ನಡೆದಿದೆ ಎಂಬ ಬಲವಾದ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆರ್ಥಿಕ ಅಕ್ರಮಗಳ ಮಾಸ್ಟರ್ ಮೈಂಡ್ ಎನ್ನಲಾದ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದ್ದು, ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.




