ಭೂತಾನ್‌ನಿಂದ ಅಕ್ರಮವಾಗಿ ದುಬಾರಿ ಬೆಲೆಯ ಐಷಾರಾಮಿ ವಾಹನಗಳನ್ನು ಅಕ್ರವಾಗಿ ಆಮದು ಮಾಡಿಕೊಳ್ಳುವ ಕಳ್ಳಸಾಗಣೆ ಜಾಲಗಳ ಕುರಿತು ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ಮನೆ ಮತ್ತು ಹಲವು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳಿಗ್ಗೆ ಕೇರಳ ಮತ್ತು ತಮಿಳುನಾಡಿನಾದ್ಯಂತ 17 ಸ್ಥಳಗಳಲ್ಲಿ ದಾಳಿ ನಡೆದಿದೆ. ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್, ಅಮಿತ್ ಚಕ್ಕಲಕಲ್ ಹಾಗೂ ತಮಿಳುನಾಡಿನ ಕೊಯಮತ್ತೂರು ಮತ್ತು ಕೇರಳದ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ ಹಾಗೂ ಕೊಟ್ಟಾಯಂನಲ್ಲಿರುವ ಕಾರು ಮಾಲೀಕರು, ವ್ಯಾಪಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ನಡೆದಿದೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅನಧಿಕೃತ ವಿದೇಶಿ ವಿನಿಮಯ ವ್ಯವಹಾರಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ಪ್ರಕರಣದಲ್ಲಿ ಕಳೆದ ತಿಂಗಳು (ಸೆಪ್ಟೆಂಬರ್) ದಾಳಿ ನಡೆದಿತ್ತು. ಇದೀಗ, ಮತ್ತೊಮ್ಮೆ ದಾಳಿ ನಡೆದಿದೆ.
ಟೊಯೋಟಾ ಲ್ಯಾಂಡ್ ಕ್ರೂಸರ್‌ಗಳು, ಲ್ಯಾಂಡ್ ರೋವರ್‌ಗಳು ಹಾಗೂ ಮಸೆರಾಟಿಸ್‌ನಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಜಾಲದ ಕುರಿತಾದ ಅಧಿಕೃತ ಮಾಹಿತಿ ಆಧಾರದ ಮೇಲೆ ಬುಧವಾರ ದಾಳಿಗಳು ನಡೆದಿವೆ. ಅಕ್ರಮ ಆಮದುಗಳನ್ನು ಭೂತಾನ್ ಮತ್ತು ನೇಪಾಳ ಮಾರ್ಗಗಳ ಮೂಲಕ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
ದುಲ್ಕರ್ ಸಲ್ಮಾನ್‌ಗೆ ಸೇರಿದ ನಿಸ್ಸಾನ್ ಪೆಟ್ರೋಲ್ SUV ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ ಸೇರಿದಂತೆ ಮೂವರು ನಟರಿಗೆ ಸಂಬಂಧಿಸಿದ ಕನಿಷ್ಠ 40 ಕಾರುಗಳನ್ನು ಇಡಿ ವಶಪಡಿಸಿಕೊಂಡಿದೆ. ಚಕ್ಕಲಕಲ್ ಅವರ ಲ್ಯಾಂಡ್ ರೋವರ್ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅವರ ಮತ್ತು ಕಳ್ಳಸಾಗಣೆದಾರರ ನಡುವೆ ನೇರ ಸಂಪರ್ಕವಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಕಳ್ಳಸಾಗಣಿಕೆ ಜಾಲವು ಭಾರತೀಯ ಸೇನೆ, ವಿದೇಶಾಂಗ ಸಚಿವಾಲಯ ಹಾಗೂ ಯುಎಸ್ ರಾಯಭಾರ ಕಚೇರಿಯಿಂದ ಪಡೆಯಲಾಗಿದೆ ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆ ದಾಖಲೆಗಳನ್ನು ಇಟ್ಟುಕೊಂಡು ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ತಮ್ಮ ಕಳ್ಳಸಾಗಣೆ ವಾಹನಗಳ ಆರ್‌ಟಿಒ ನೋಂದಣಿಗಳನ್ನು ಮಾಡಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.




