ಸ್ವಚ್ಛತಾ ಅಭಿಯಾನದ ಅಡಿ ಕೆರೆಯನ್ನು ಸ್ವಚ್ಛಗೊಳಿಸುವಾಗ ಕೆರೆಯಲ್ಲಿ ನೂರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಛಾತರ್‌ಪುರ ಜಿಲ್ಲೆಯ ಬಿಜವಾರ್ ಪಟ್ಟಣದಲ್ಲಿ ನಡೆದಿದೆ. ಈ ಚೀಟಿಗಳು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದುರ್ಬಳಕೆ ಆಗಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.
ಬಿಜವಾರ್ ಪಟ್ಟಣದ ರಾಜಾತಲಾಬ್ ಕೆರೆಯಲ್ಲಿ ಸೊಮವಾರ ಸ್ವಚ್ಛತಾ ಅಭಿಯಾನ ನಡೆಸಲಾಗಿತ್ತು. ಈ ವೇಳೆ, ನೀರಿನಲ್ಲಿ ಚೀಲವೊಂದು ತೇಲುತ್ತಿತ್ತು. ಅದನ್ನು ಗಮನಿಸಿದ ಪೌರಕಾರ್ಮಿಕರು ಚೀಲವನ್ನು ತೆರೆದು ನೋಡಿದಾಗ, ಅದರಲ್ಲಿ ಸುಮಾರು 500 ಮತದಾರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಆ ಮತ ಚೀಟಿಗಳು ಪಟ್ಟಣದ ವಾರ್ಡ್ ನಂ.15ಕ್ಕೆ ಸಂಬಂಧಿಸಿವೆ ಎಂದು ವರದಿಯಾಗಿದೆ.
ಇವು ನೈಜ ಗುರುತಿನ ಚೀಟಿಗಳು. ಆದರೆ, ಮತದಾರರಿಗೆ ವಿತರಣೆಯಾಗದೇ ಉಳಿದುಹೋಗಿದ್ದವು. ಈ ಚೀಟಿಗಳು ಮತದಾರರಿಗೆ ತಲುಪಿಲ್ಲ ಎನ್ನಲಾಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
बिजावर विधानसभा के तालाब में सफाई के दौरान सैकड़ो की संख्या में मतदाता पहचान पत्र मिलना वोट चोरी का सबसे बड़ा सबूत है।छतरपुर कांग्रेस अध्यक्ष #श्री_गगन_यादव जी ने प्रशासन से मांग की है कि इसकी निष्पक्ष जांच हो ताकि यह पता चल सके कि इतनी बड़ी संख्या में वोटर कार्ड कहां से आए। pic.twitter.com/FEFx3Nelqx
— KP Anuragi (@Kpanuragi113670) October 4, 2025
ಇನ್ನು, ಈ ಘಟನೆಯು ಇತ್ತೀಚೆಗೆ ಕಾಂಗ್ರೆಸ್ ಮತ್ತು ವಿಪಕ್ಷಗಳು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಆರೋಪಿಸುತ್ತಿರುವ ‘ವೋಟ್ ಚೋರಿ’ (ಮತಗಳವು) ಆರೋಪಕ್ಕೆ ಮತ್ತಷ್ಟು ಶಕ್ತಿ ತುಂಬಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ವೋಟ್ ಚೋರ್ – ಗಾದಿ ಚೋಡ್’ ಎಂದಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
“500ಕ್ಕೂ ಹೆಚ್ಚು ಮತದಾರ ಗುರುತಿನ ಚೀಟಿಗಳು ಕೆರೆಯ ಪಾಲಾಗಲು ಹೇಗೆ ಸಾಧ್ಯ? ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ಘಟನೆ ವಿರುದ್ಧ ರಾಜ್ಯವ್ಯಾಪಿ ಆಂದೋಲನ ಕೈಗೊಳ್ಳಲಾಗುತ್ತದೆ” ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಗನ್ ಯಾದವ್ ಹೇಳಿದ್ದಾರೆ.




