ಮಧ್ಯಪ್ರದೇಶದಲ್ಲಿ ತರಬೇತಿ ಪಡೆಯುತ್ತಿರುವ ಪೊಲೀಸರಿಗೆ ‘ದಕ್ಷಿಣಮೂರ್ತಿ ಶ್ಲೋಕ’ ಕೇಳಿಯೇ ದಿನವನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಧಾರ್ಮಿಕ ಶ್ಲೋಕಗಳನ್ನು ಕಡ್ಡಾಯಗೊಳಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಈ ಆದೇಶವನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ರಾಜಾ ಬಾಬು ಸಿಂಗ್ ಹೊರಡಿಸಿದ್ದು, ರಾಜ್ಯದ ಎಲ್ಲಾ ಪೊಲೀಸ್ ತರಬೇತಿ ಶಾಲೆಗಳು (ಪಿಟಿಎಸ್) ತರಬೇತಿ ಕ್ಯಾಂಪಸ್‌ಗಳಲ್ಲಿ ಸ್ಥಾಪಿಸಲಾದ ಧ್ವನಿವರ್ಧಕಗಳ ಮೂಲಕ ದಕ್ಷಿಣಾಮೂರ್ತಿ ಸ್ತೋತ್ರವನ್ನು ನುಡಿಸುವ ಮೂಲಕ ದಿನವನ್ನು ಪ್ರಾರಂಭಿಸಬೇಕು ಎಂದು ನಿರ್ದೇಶಿಸಿದ್ದಾರೆ. ತರಬೇತುದಾರರು ಮತ್ತು ತರಬೇತಿ ಪಡೆಯುವವರು ದಿನದ ತರಬೇತಿ ಪ್ರಾರಂಭವಾಗುವ ಮೊದಲು ಶ್ಲೋಕಗಳನ್ನು ಕೇಳಬೇಕಾಗಿದೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ | ನಾರಿಯರು ‘ಆಡಳಿತಗಾರ್ತಿ’ಯಾಗಿ ಹೊರಹೊಮ್ಮಿದ ಕ್ರಾಂತಿಕಾರಿ ಹಾದಿಯ ಸ್ಮರಣೆ
ಎಲ್ಲಾ ತರಬೇತಿ ಕೇಂದ್ರಗಳಿಗೆ ಕಳುಹಿಸಲಾದ ಆದೇಶ ಪತ್ರದಲ್ಲಿ, “ಶಿವನ ಒಂದು ಅಂಶವಾದ ದಕ್ಷಿಣಮೂರ್ತಿಯನ್ನು ಬುದ್ಧಿವಂತಿಕೆ, ಜ್ಞಾನ, ಧ್ಯಾನ ಮತ್ತು ಯೋಗ ಮೌಲ್ಯಗಳನ್ನು ಪ್ರತಿನಿಧಿಸುವ ‘ಅಂತಿಮ ವಿಶ್ವ ಶಿಕ್ಷಕ’ – ಇದು ಶಿಸ್ತುಬದ್ಧ ಮತ್ತು ಸಹಾನುಭೂತಿಯ ಪೊಲೀಸ್ ಪಡೆವನ್ನು ರೂಪಿಸಲು ಅತ್ಯಗತ್ಯ. ಜ್ಞಾನ ಎಂದರೆ ಕೇವಲ ಮಾಹಿತಿಯ ಸಂಗ್ರಹಣೆಯಲ್ಲ. ಪೊಲೀಸ್ ಅಧಿಕಾರಿಗೆ ವಿವೇಚನೆ, ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸೂಕ್ಷ್ಮತೆಯೂ ಇರಬೇಕು” ಎಂದು ವಿವರಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ, “ದಕ್ಷಿಣಮೂರ್ತಿ ಶ್ಲೋಕಗಳು ಕ್ಯಾಂಪಸ್‌ನಾದ್ಯಂತ ಪ್ರತಿಧ್ವನಿಸಿದರೆ, ತರಬೇತಿ ಪಡೆಯುತ್ತಿರುವ ಪೊಲೀಸರು ಆಳವಾದ ತಿಳುವಳಿಕೆ ಮತ್ತು ನೈತಿಕ ಸ್ಪಷ್ಟತೆಯನ್ನು ಅಳವಡಿಸಿಕೊಳ್ಳುತ್ತಾರೆ. ಅಂತಿಮವಾಗಿ ನುರಿತ ವೃತ್ತಿಪರರಾಗಿ ಮಾತ್ರವಲ್ಲದೆ ಜವಾಬ್ದಾರಿಯುತ ಮತ್ತು ಮಾನವೀಯ ಅಧಿಕಾರಿಗಳಾಗಿ ಹೊರಹೊಮ್ಮುತ್ತಾರೆ” ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಕಳೆದ ವರ್ಷ ಇಲಾಖೆಯು ಎಂಟು ಪೊಲೀಸ್ ತರಬೇತಿ ಶಾಲೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವವರು ರಾತ್ರಿಯ ಧ್ಯಾನ ಅವಧಿಗೂ ಮುನ್ನ ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಲು ಸೂಚಿಸಿತ್ತು. ಇನ್ನೊಂದು ಆದೇಶದಲ್ಲಿ ತುಳಸಿದಾಸರ ರಾಮಚರಿತಮಾನಸದ ಶ್ಲೋಕಗಳನ್ನು ಪಠಿಸಲು ತಿಳಿಸಲಾಗಿತ್ತು. ಈ ಆದೇಶಗಳನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿದೆ. ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಇಂತಹ ಆದೇಶಗಳನ್ನು ಹೊರಡಿಸುವುದು ಕಳವಳಕಾರಿ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಹಿಳಾ ದಿನದ ವಿಶೇಷ | ವಿನಾಶದ ಸುಳಿಯಲ್ಲಿ ಸಿಲುಕಿ, ದಾಖಲೆಗಳಿಗೂ ಸಿಗದೆ ಹೋದ ಮೂಕ ಹಕ್ಕಿ ʼಹೆಣ್ಣುʼ
ಪೊಲೀಸ್ ತರಬೇತಿಯು ವೃತ್ತಿಪರತೆ, ಶಿಸ್ತು ಮತ್ತು ಕಾನೂನಿನ ಅರಿವನ್ನು ಮೂಡಿಸುವಂತಿರಬೇಕು. ಅಲ್ಲಿ ಧಾರ್ಮಿಕ ಆಚರಣೆಗಳನ್ನು ತರುವುದು ಆಡಳಿತಾತ್ಮಕವಾಗಿ ಸಮರ್ಥನೀಯವಲ್ಲ ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಟೀಕಿಸಿವೆ.
ಪೊಲೀಸ್ ಇಲಾಖೆಯು ಜಾತ್ಯತೀತವಾಗಿರಬೇಕು. ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಯಾವುದೇ ಧರ್ಮದ ಶ್ಲೋಕಗಳನ್ನು ಕಡ್ಡಾಯಗೊಳಿಸುವುದು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾದುದು ಎಂಬ ವಾದಗಳೂ ಆರಂಭವಾಗಿದೆ. ತೀವ್ರ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅಷ್ಟು ಮಾತ್ರವಲ್ಲದೆ ಪೊಲೀಸ್ ಇಲಾಖೆಯಲ್ಲಿ ವಿವಿಧ ಧರ್ಮ, ನಂಬಿಕೆ ಮತ್ತು ಹಿನ್ನೆಲೆಯ ಅಭ್ಯರ್ಥಿಗಳು ಇರುತ್ತಾರೆ. ಇಂತಹ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಧಾರ್ಮಿಕ ಶ್ಲೋಕವನ್ನು ಎಲ್ಲರ ಮೇಲೆ ಹೇರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.





