ತಮಗೆ ಅನುಕೂಲಕರ ಆದೇಶ ನೀಡುವ ಸಲುವಾಗಿ ಹಿರಿಯ ವಕೀಲರೊಬ್ಬರು ಕಕ್ಷಿದಾರರಿಂದ 50 ಲಕ್ಷ ರೂ. ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಿರ್ಮಲ್ ಕುಮಾರ್ ಅವರು ಪ್ರಕರಣವೊಂದರ ವಿಚಾರಣೆಯಿಂದ ಹಿಂದೆ ಸರಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ಈ ವಿಷಯದ ಸತ್ಯಾಸತ್ಯತೆ ಅರಿಯಲು ಹೈಕೋರ್ಟ್‌ನ ಜಾಗೃತ ದಳದ ತನಿಖೆಗೆ ಆದೇಶಿಸಿದ್ದಾರೆ.
ಸಿಬಿಐ ಪ್ರಕರಣಗಳ 12ನೇ ಹೆಚ್ಚುವರಿ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎನ್. ಗಣೇಶ್ ಅಗರ್ವಾಲ್ ಮತ್ತು ನರೇಶ್ ಪ್ರಸಾದ್ ಅಗರ್ವಾಲ್ ಎಂಬುವರು ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಲಂಚದ ಆರೋಪ ಪ್ರಸ್ತಾಪವಾಗಿದೆ.
ಫೆಬ್ರವರಿ 5 ರಂದು ಈ ಅರ್ಜಿ ವಿಚಾರಣೆಗೆ ಬಂದಾಗ, ಕೇಂದ್ರ ಕಾನೂನು ಸಚಿವಾಲಯದಿಂದ ಹೈಕೋರ್ಟ್ ರಿಜಿಸ್ಟ್ರಿಗೆ ಬಂದಿದ್ದ ಪತ್ರವೊಂದನ್ನು ನ್ಯಾಯಮೂರ್ತಿ ನಿರ್ಮಲ್ ಕುಮಾರ್ ಅವರು ಉಲ್ಲೇಖಿಸಿದರು. ಈ ಪತ್ರದೊಂದಿಗೆ ‘ಅಖಿಲ ಭಾರತ ವಕೀಲರ ನ್ಯಾಯ ಒಕ್ಕೂಟ’ ನೀಡಿದ ಮನವಿಯ ಪ್ರತಿಯನ್ನೂ ಲಗತ್ತಿಸಲಾಗಿತ್ತು.
ಆ ಪತ್ರದಲ್ಲಿ, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರೊಬ್ಬರು ತಮ್ಮ ಕಕ್ಷಿದಾರರಿಂದ 50 ಲಕ್ಷ ರೂ. ಹಣವನ್ನು ಪಡೆದಿದ್ದಾರೆ. ಈ ಹಣವನ್ನು ನಿಮ್ಮ ಗೌರವಕ್ಕೆ (ನ್ಯಾಯಮೂರ್ತಿಗಳಿಗೆ) ನೀಡಬೇಕೆಂದು ಹೇಳಿ ಪಡೆಯಲಾಗಿದೆ. ಆದರೆ, ಹಣ ಸಂದಾಯವಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ, ದಯವಿಟ್ಟು ಕಕ್ಷಿದಾರರ ಪರವಾಗಿ ಸೂಕ್ತ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಜರುಗಿಸಬೇಕು,” ಎಂದು ಎಐಎಲ್‌ಎಜೆ ಕಾರ್ಯದರ್ಶಿ ಸಹಿಯುಳ್ಳ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಈ ಪತ್ರವನ್ನು ಸಿಬಿಐ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಶ್ರೀನಿವಾಸನ್ ಮತ್ತು ಮೇಲ್ಮನವಿದಾರರ ಪರ ಹಿರಿಯ ವಕೀಲ ಮುರಳಿ ಕುಮಾರನ್ ಅವರ ಗಮನಕ್ಕೆ ತರಲಾಯಿತು. ಆರೋಪಗಳನ್ನು ನಿರಾಕರಿಸಿದ ವಕೀಲ ಮುರಳಿ ಕುಮಾರನ್, ಪತ್ರದಲ್ಲಿರುವ ಆರೋಪಗಳು ಸುಳ್ಳು ಮತ್ತು ತಾವು ಯಾವುದೇ ತನಿಖೆಗೆ ಸಹಕರಿಸಲು ಸಿದ್ಧವಿರುವುದಾಗಿ ತಿಳಿಸಿದರು. ಇತ್ತ ಸಿಬಿಐ ಪರ ವಕೀಲ ಶ್ರೀನಿವಾಸನ್ ವಾದ ಮಂಡಿಸಿ, “ಇಂತಹ ಪ್ರಾತಿನಿಧ್ಯಗಳನ್ನು ಪುರಸ್ಕರಿಸಬಾರದು. ಇದು ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತದೆ. ಇಂತಹ ಸುಳ್ಳು ಆರೋಪ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಕೋರಿದರು.
ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಿರ್ಮಲ್ ಕುಮಾರ್, “ಸಂಘಟನೆಯ ಪತ್ರದಲ್ಲಿ ನಿರ್ದಿಷ್ಟ ಆರೋಪಗಳಿರುವುದರಿಂದ, ಈ ವಿಷಯವನ್ನು ಹೈಕೋರ್ಟ್‌ನ ಜಾಗೃತ ದಳಕ್ಕೆ ವಹಿಸುವುದು ಸೂಕ್ತ. ಹೀಗಾಗಿ, ಈ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲು ಒಲವು ಹೊಂದಿಲ್ಲ” ಎಂದು ತಿಳಿಸಿದರು.
ಅಲ್ಲದೆ, ಈ ಪ್ರಕರಣವನ್ನು ಸೂಕ್ತ ಪೀಠದ ಮುಂದೆ ನಿಗದಿಪಡಿಸಲು ಮತ್ತು ಜಾಗೃತ ದಳದಿಂದ ಶೋಧ ನಡೆಸಿ ಕ್ರಮ ಕೈಗೊಳ್ಳಲು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವುದು ಸೂಕ್ತ ಎಂದು ಅಭಿಪ್ರಾಯಪಟ್ಟು, ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿದರು





