ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಸಿಪಿ (ಅಜಿತ್ ಬಣ) ಹೇಳಿರುವುದಾಗಿ ವರದಿಯಾಗಿದೆ.
ಪ್ರಸ್ತುತ, ಸುನೇತ್ರಾ ಅವರು ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ನಾಯಕರು ಪ್ರಸ್ತಾಪಿಸಿದ್ದಾರೆ. ಸುನೇತ್ರಾ ಕೂಡ ಉಪ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುನೇತ್ರಾ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆಯ ಜೊತೆಗೆ, ಅಜಿತ್ ಪವಾರ್ ನಿರ್ವಹಿಸುತ್ತಿದ್ದ ಅಬಕಾರಿ ಮತ್ತು ಕ್ರೀಡಾ ಖಾತೆಗಳನ್ನೂ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಮಹಾಯುತಿಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಯಾರಿಗೆ ನೀಡಬೇಕು ಎಂಬುದನ್ನು ಎನ್‌ಸಿಪಿ ತೀರ್ಮಾನಿಸಬೇಕು. ಎನ್‌ಸಿಪಿ ನಿರ್ಧಾರಕ್ಕೆ ನಮ್ಮ ಯಾವುದೇ ತಕರಾರು ಇರುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರು. ಇದೀಗ, ಸುನೇತ್ರಾ ಅವರ ನೇಮಕಕ್ಕೆ ದೇವೇಂದ್ರ ಫಡ್ನವೀಸ್ ಕೂಡ ಒಪ್ಪಿಕೊಂಡಿದ್ದಾರೆ ಎಂದು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ.
ಅಜಿತ್ ಪವಾರ್ ಅವರು ಹಣಕಾಸು ಖಾತೆಯನ್ನೂ ಕೂಡ ನಿರ್ವಹಿಸುತ್ತಿದ್ದರು. ಆದರೆ, ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ಇರುವುದರಿಂದ, ಅಲ್ಲಿಯವರೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಆ ಖಾತೆಯನ್ನು ನಿರ್ವಹಿಸುತ್ತಾರೆ. ಅಧಿವೇಶನದ ಬಳಿಕ ಆ ಖಾತೆಯನ್ನು ಎನ್‌ಸಿಪಿಗೆ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.




