ಮಹಾರಾಷ್ಟ್ರದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ, ಸಚಿವ ಗಿರೀಶ್ ಮಹಾಜನ್ ಅವರು ತಮ್ಮ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಡೆಯು ಸೇವಾ ವಲಯದ ಅಧಿಕಾರಿಗಳು ಹಾಗೂ ನೌಕರರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಚಿವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಗಣರಾಜ್ಯೋತ್ಸವದ ನಿಮಿತ್ತ ನಡೆದ ಪರೇಡ್ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಗಿರೀಶ್ ಮಹಾಜನ್, ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಇತರೆ ಮಹಾನ್ ನಾಯಕರನ್ನು ಸ್ಮರಿಸಿದರು. ತಮ್ಮ ಭಾಷಣದಲ್ಲಿ ಹಲವು ಗಣ್ಯರ ಹೆಸರುಗಳನ್ನು ಉಲ್ಲೇಖಿಸಿದ ಅವರು, ಭಾರತದ ಸಂವಿಧಾನದ ಪಿತಾಮಹ ಡಾ. ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.
ಗಣರಾಜ್ಯೋತ್ಸವವು ಸಂವಿಧಾನ ಜಾರಿಗೆ ಬಂದ ಮಹತ್ವದ ದಿನವಾಗಿದೆ. ಇಂತಹ ದಿನದಂದೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸದಿರುವುದು ಅಕ್ಷಮ್ಯ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳ ವರ್ಗ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
”ಇತರೆ ಎಲ್ಲ ನಾಯಕರ ಹೆಸರುಗಳನ್ನು ಹೇಳಿ, ಕೇವಲ ಅಂಬೇಡ್ಕರ್ ಅವರ ಹೆಸರನ್ನು ಮಾತ್ರ ಕೈಬಿಟ್ಟಿರುವುದು ಪ್ರಮಾದವಷ್ಟೇ ಅಲ್ಲ, ಅದು ಅವಗಣನೆಯ ಸಂಕೇತವಾಗಿದೆ,” ಎಂದು ಅಧಿಕಾರಿಗಳ ಒಕ್ಕೂಟದ ಪ್ರಮುಖರು ದೂರಿದ್ದಾರೆ. ಈ ವಿಷಯವು ಈಗ ಸೇವಾ ವಲಯದ ಅಧಿಕಾರಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಚಿವರ ಧೋರಣೆಯನ್ನು ಖಂಡಿಸಿದ್ದಾರೆ.
ಸಚಿವರ ಕ್ಷಮೆಯಾಚನೆ
ಈ ಆಕ್ಷೇಪದ ನಂತರ ಸಚಿವ ಮಹಾಜನ್ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರು. “ನಾನು ಭಾಷಣದಲ್ಲಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಘೋಷಣೆಗಳನ್ನು ಕೂಗಿದೆ. ಡಾ. ಅಂಬೇಡ್ಕರ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಬಿಟ್ಟಿಲ್ಲ. ನಾನು ಯಾವಾಗಲೂ ಅವರನ್ನು ಸ್ಮರಿಸುತ್ತೇನೆ, ಗೌರವಿಸುತ್ತೇನೆ. ಆದರೂ ಈ ತಪ್ಪಿಗೆ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದರು.
ಈ ಘಟನೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮುಂಬೈ ಸಂಸದೆಯೂ ಆಗಿರುವ ಕಾಂಗ್ರೆಸ್ ನಗರಾಧ್ಯಕ್ಷೆ ವರ್ಷಾ ಗಾಯಕ್ವಾಡ್ ಅವರು, “ಗಣತಂತ್ರ ದಿನ ಎಂದರೆ ಸಂವಿಧಾನದ ಆಚರಣೆ. ಅದರ ರೂವಾರಿಗಳನ್ನು ಮರೆಯುವುದು ಬಿಜೆಪಿಯ ಮಹಾರಾಷ್ಟ್ರ ವಿರೋಧಿ ಮನೋಭಾವವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.





