ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆಯನ್ನು ಪ್ರಜ್ಞೆತಪ್ಪಿಸಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅಪರಿಚಿತ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ಘಟನೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಗುರುವಾರ, ಐಪಿಸಿ ಸೆಕ್ಷನ್ 328, 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಅರ್ಚನಾ ದುಸಾನೆ ತಿಳಿಸಿದ್ದಾರೆ.
ಮಾರ್ಚ್ 10 ರಂದು ಉತ್ತರ ಪ್ರದೇಶಕ್ಕೆ ಹೋಗುವ ತುಳಸಿ ಎಕ್ಸ್‌ಪ್ರೆಸ್‌ನಲ್ಲಿ ತಾನು ಪ್ರಯಾಣಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಪ್ರಜ್ಞಾಹೀನಗೊಳಿಸಲು ಹಾನಿಕಾರಕ ವಸ್ತುವನ್ನು ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈನ ಕುರ್ಲಾದಲ್ಲಿರುವ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಹೊರಟಿದ್ದ ರೈಲು ಥಾಣೆ ರೈಲು ನಿಲ್ದಾಣಕ್ಕೆ ಬಂದ 40 ನಿಮಿಷಗಳ ನಂತರ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ದೂರದಾರ ಸಂತ್ರಸ್ತೆ ಘಟನೆ ನಡೆದ 39 ದಿನಗಳ ಬಳಿಕ ಏಪ್ರಿಲ್‌ನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಜಿಆರ್‌ಪಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅದಾದ, 21 ದಿನಗಳ ನಂತರ ದೂರನ್ನು ಥಾಣೆ ಜಿಆರ್‌ಪಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲದ ಕಾರಣ, ತುಳಸಿ ಎಕ್ಸ್‌ಪ್ರೆಸ್ ಮತ್ತು ಅದೇ ಸಮಯದಲ್ಲಿ ನಿಲ್ದಾಣದಿಂದ ಹೊರಡುವ ಇತರ ಎರಡು ರೈಲುಗಳ ರಿಸರ್ವೇಶನ್ ಚಾರ್ಟ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಮೊಬೈಲ್ ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.




