ಅಧಿಕಾರಸ್ಥರಿಗೆ ಸುಡು ಬೆಂಕಿಯಾಗಿ, ಆದಿವಾಸಿಗಳ ಹಾದಿಯ ಬೆಳಕಾಗಿ ಬದುಕಿದ್ದಳು ಆಕೆ!

Date:

ದೋಪ್ದಿಯ ಲೈಂಗಿಕ ಅವಯವಗಳು ಅತ್ಯಾಚಾರ ಮತ್ತು ಅಮಾನುಷ ಚಿತ್ರಹಿಂಸೆಯಿಂದ ಜರ್ಝರಿತಗೊಂಡಿರುತ್ತವೆ. ಕೈ ಕಾಲುಗಳ ಅಗಲಿಸಿ ಕಟ್ಟಿ ಹಾಕಿ ಇರುಳೆಲ್ಲ ಆಕೆಯ 'ಒಡಲನ್ನು ಸೀಳಲಾಗಿರುತ್ತದೆ'. ಯಾತನೆಯಿಂದ ಮೂರ್ಛೆ-ಎಚ್ಚರಗಳ ನಡುವೆ ಜೀಕುತ್ತ ಕಣ್ತೆರೆದಾಗ ಸಾವಿರ ಚಂದ್ರ ಸೂರ್ಯರು ಕಣ್ಣ ಮುಂದೆ ಗರಗರನೆ ತಿರುಗಿದಂತೆ...ಒಂದರ ನಂತರ ಮತ್ತೊಂದರಂತೆ ರಕ್ತಮಾಂಸದ ಪುರುಷದಂಡಗಳು ಆಕೆಯನ್ನು ಬಗೆಯುತ್ತಲೇ ಇರುತ್ತವೆ.

ಸ್ಥಳ ಪಶ್ಚಿಮ ಬಂಗಾಳದ ಜಾಧವಪುರ. ಮೂರು ವರ್ಷಗಳ ಜೈಲು ವಾಸದಿಂದ ಹೊರಬಿದ್ದ ಆತ ಹೊಟ್ಟೆ ಹೊರೆಯಲು ಜಾಧವಪುರದಲ್ಲಿ ರಿಕ್ಷಾ ತುಳಿಯುತ್ತಾನೆ. ಏರುವ ಸವಾರಿಗಳಿಗಾಗಿ ಕಾದು ಸಾಲು ಹಚ್ಚಿರುತ್ತವೆ ರಿಕ್ಷಾಗಳು. ಈತನ ಸರದಿ ದೂರವಿರುತ್ತದೆ. ಪುಸ್ತಕವೊಂದನ್ನು ತೆರೆದು ಓದತೊಡಗುತ್ತಾನೆ. ಅದರ ಹೆಸರ ‘ಅಗ್ನಿಗರ್ಭ’. ಓದಿ ಮುಗಿಸಲು ಐದಾರು ಪುಟಗಳು ಬಾಕಿ ಇರುತ್ತವೆ. ಈತನ ಸರದಿ ಬಂದಿರುತ್ತದೆ. ನೆರೆತ ತಲೆಗೂದಲಿನ ಗಂಭೀರ ಮುಖಮುದ್ರೆಯ ಹಿರಿಯ ಮಹಿಳೆಯೊಬ್ಬರು ರಿಕ್ಷಾ ಏರಲು ಬರುತ್ತಾರೆ. ಪುಸ್ತಕದ ಓದಿನಲ್ಲಿ ಮುಳುಗಿದ್ದ ಈತ ಈ ಸವಾರಿಯನ್ನು ಕರೆದೊಯ್ಯುವಂತೆ ಸರದಿಯಲ್ಲಿ ತನ್ನ ಹಿಂದೆ ಕಾಯುತ್ತಿದ್ದ ಮತ್ತೊಬ್ಬ ರಿಕ್ಷಾ ಸಂಗಾತಿಗೆ ಹೇಳುತ್ತಾನೆ. ಆತ ಒಪ್ಪುವುದಿಲ್ಲ. ಈತ ಒಲ್ಲದ ಮನಸ್ಸಿನಿಂದ ಪುಸ್ತಕ ಮುಚ್ಚಿಡುತ್ತಾನೆ. ಸವಾರಿಯನ್ನು ಕೂರಿಸಿಕೊಂಡು ರಿಕ್ಷಾ ತುಳಿಯಲಾರಂಭಿಸುತ್ತಾನೆ. ಬಿಸಿಲ ಧಗೆ. ಪುಸ್ತಕದಲ್ಲಿ ಓದಿದ್ದ ಪದವೊಂದು ಆತನ ತಲೆ ಕೊರೆಯುತ್ತಿರುತ್ತದೆ. ‘ಜಿಜೀಭಿಷ’ ಎಂಬ ಪದದ ಅರ್ಥ ತಿಳಿಯದಾಗಿರುತ್ತದೆ. ತನ್ನ ರಿಕ್ಷಾ ಏರಿ ಕುಳಿತಿದ್ದ ಮಹಿಳೆಯನ್ನು ಕೇಳುತ್ತಾನೆ. ಚಕಿತಗೊಂಡಂತೆ ಕಾಣಬರುತ್ತಾರೆ ಆಕೆ. ಹಾಗೆಂದರೆ ಬದುಕಲೇಬೇಕೆಂಬ ಅದಮ್ಯ ಇಚ್ಛೆ ಎಂದು ಹೇಳುತ್ತಾರೆ. ಈ ಪದ ಎಲ್ಲಿ ಸಿಕ್ಕಿತು ಎಂದು ಕೇಳುತ್ತಾರೆ. ಪುಸ್ತಕವೊಂದರಲ್ಲಿ ಎನ್ನುತ್ತಾನೆ ಆತ. ಮಾತಿಲ್ಲದೆ ದಾರಿ ಸಾಗುತ್ತದೆ. ಮುಸ್ಸಂಜೆಯಲ್ಲಿ ಆಕೆಯ ಮುಖವನ್ನು ಗಮನಿಸಿ ನೋಡಿರುವುದಿಲ್ಲ ಈತ.  ರಿಕ್ಷಾ ತುಳಿಯುತ್ತಿರುವಾಗ ಈಗ ಹಿಂದೆ ತಿರುಗಿ ನೋಡುವುದೆಂತು? ಎಲ್ಲಿಯ ತನಕ ಓದಿದ್ದೀಯಾ ಎಂದು ಕೇಳುತ್ತಾರೆ ಆಕೆ. ಶಾಲೆಗೆ ಹೋಗಿಲ್ಲ. ಚೂರುಪಾರು ನಾನೇ ಕಲಿತಿರುವೆ ಎನ್ನುತ್ತಾನೆ. ಚಕ್ರಗಳು ತಿರುಗುತ್ತವೆ. ಮಹಿಳೆಯ ಮನೆ ಹತ್ತಿರ ಬಂದಿರುತ್ತದೆ.

‘ನಿನ್ನಂತಹ ದುಡಿಯುವ ಜನರು ಬರೆಯುವ ನಿಯತಕಾಲಿಕವೊಂದನ್ನು ನಾನು ಹೊರತರುತ್ತೇನೆ. ನೀನು ಬರೆಯುವೆಯಾ, ಬರೆದರೆ ಪ್ರಕಟಿಸುವೆ’ ಎಂದು ಕೇಳುತ್ತಾರೆ ಆಕೆ.

ಈತನಿಗೆ ನಂಬಲಾಗುವುದಿಲ್ಲ. ಏನು ಬರೆಯಲಿ ಎನ್ನುತ್ತಾನೆ. ಸೈಕಲ್ ರಿಕ್ಷಾ ತುಳಿದು ಹೊಟ್ಟೆ ಹೊರೆವ ನಿನ್ನ ಬದುಕಿನ ಬಗೆಗೆ ಬರೆ ಎನ್ನುತ್ತಾರೆ. ಆಕೆ ಇಳಿಯುವ ಸ್ಥಳ ಬಂದಿರುತ್ತದೆ. ಇಳಿದು ವಿಳಾಸ ಗೀಚಿದ ಚೀಟಿಯನ್ನು ಈತನ ಕೈಗಿಡುತ್ತಾರೆ. ಆದನ್ನು ಓದಿ ಈತನ ಲೋಕ ಅಮಿತೋತ್ಸಾಹದಿಂದ ಉಯ್ಯಾಲೆಯಾಡಿರುತ್ತದೆ. ನೀವು!? ಎನ್ನುತ್ತಾನೆ ಆಶ್ಚರ್ಯಚಕಿತನಾಗಿ. ‘ನೀವು ನನಗೆ ಗೊತ್ತು ಓ ಮಹಾನ್ ಲೇಖಕರೇ! ನೆತ್ತರು, ಬೆವರು, ಸಂಘರ್ಷ, ಪ್ರತಿಭಟನೆ, ಪ್ರತಿರೋಧ, ಆಕ್ರೋಶವೇ ನಿಮ್ಮ ಅರಿವಿನ ಮೂಲ. ದಿಕ್ಕಿಲ್ಲದ ಶೋಷಿತ ಜನರಿಗಾಗಿ ಖಡ್ಗದಂತೆ ಕೋರೈಸುತ್ತದೆ ನಿಮ್ಮ ಕೋಪೋದ್ರಿಕ್ತ ಲೇಖನಿ! ನಿಮ್ಮ ಕತೆ ದ್ರೌಪದಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದವರನ್ನು ಬೇಟೆಯಾಡಿ ಕೊಲ್ಲುವಂತೆ ಕುದಿಸಿತು ನನ್ನನ್ನು ಎಂದು ಹೇಳಬಯಸುತ್ತಾನೆ. ಆದರೆ ಮಾತುಗಳು ಗಂಟಲಿಂದಾಚೆಗೆ ಬರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ನಿಮ್ಮ ಪುಸ್ತಕಗಳನ್ನು ಓದಿದ್ದೇನೆ. ನಿಮ್ಮ ‘ಅಗ್ನಿಗರ್ಭ’ ಇದೋ ಇಲ್ಲಿದೆ ಎಂದು ಪುಸ್ತಕವನ್ನು ಹೊರತೆಗೆದು ತೋರಿಸುತ್ತಾನೆ. ಆಕೆಯ ಮುಖದಲ್ಲಿ ತೃಪ್ತಿಯ ಭಾವವೊಂದು ಹಾದು ಹೋದಂತೆ ಈತನಿಗೆ ಅನಿಸುತ್ತದೆ. ಎದೆ ನಗಾರಿಯಂತೆ ಬಡಿಯತೊಡಗುತ್ತದೆ. ಭಾವೋದ್ವೇಗದಿಂದ ಮೈಯೆಲ್ಲ ಕಂಪಿಸತೊಡಗುತ್ತದೆ. ಎರಡು ಕಾಲುಗಳ ಮೇಲೆ ನಿಲ್ಲುವುದೂ ಕಷ್ಟವೆನಿಸುತ್ತದೆ. ಆಕೆಯ ಮುಂದೆ ಆತನ ಶಿರಬಾಗುತ್ತದೆ. ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ಸರಸ್ವತಿಯ ಮತ್ತೊಂದು ಹೆಸರೇ ಮಹಾಶ್ವೇತಾ ಅಲ್ಲವೇ ಎಂದುಕೊಳ್ಳುತ್ತಾನೆ. ಮರುದಿನ ಊಟಕ್ಕೆ ಬರುವಂತೆ ಆಹ್ವಾನಿಸುತ್ತಾರೆ. ಮಾರನೆಯ ಮುಂಜಾನೆ ಅವರ ಮನೆ ಹೊಸ್ತಿಲು ತುಳಿದಾಗ ಬದುಕಿನ ಶಿಖರವನ್ನೇ ಏರಿದಂತೆ ಎನಿಸಿರುತ್ತದೆ ಆತನಿಗೆ. ಅಲ್ಲಿದ್ದ ಇನ್ನೂ ಹಲವರಿಗೆ ಬರೆಹಗಾರನೆಂದೇ ಈತನ ಪರಿಚಯ ಮಾಡಿಕೊಡುತ್ತಾರೆ ಮಹಾಶ್ವೇತಾ ದೇವಿ. ಅಲ್ಲಿಂದ ಶುರುವಾಗುತ್ತದೆ ಈತನ ಬದುಕಿನ ಕಡುಕಷ್ಟದ ಮಜಲು. ಬಂದೂಕುಗಳು ಮತ್ತು ಬಾಂಬುಗಳ ಹಿಡಿದು ಹೋರಾಡಿದ್ದಕ್ಕಿಂತ ಕಠಿಣವೆನಿಸುತ್ತದೆ ಬರೆಹ. ಎಷ್ಟೋ ದಿನ ರಿಕ್ಷಾ ತುಳಿಯವ ಕೆಲಸಕ್ಕೇ ಹೋಗುವುದಿಲ್ಲ. ಲೀಟರುಗಟ್ಟಲೆ ಸೀಮೆ ಎಣ್ಣೆ ಸುಡುತ್ತಾನೆ. ರೀಮುಗಟ್ಟಲೆ ಬಿಳಿ ಕಾಗದ ಹರಿದೆಸೆಯುತ್ತಾನೆ. ‘ನಾನು ರಿಕ್ಷಾ ತುಳಿಯುತ್ತೇನೆ’ ಎಂಬ ಲೇಖನ ಕಡೆಗೂ ಕಾಗದಕ್ಕಿಳಿಯುತ್ತದೆ. ಮಹಾಶ್ವೇತಾ ನಡೆಸಿದ ”ಬರ್ತಿಕಾ’ ನಿಯತಕಾಲಿಕದ 1981ರ ಜನವರಿ-ಮಾರ್ಚ್ ಸಂಚಿಕೆಯಲ್ಲಿ ಅಚ್ಚಾಗುತ್ತದೆ. 

ರಿಕ್ಷಾ ತುಳಿಯುವ ಆತನ ಹೆಸರು ಮನೋರಂಜನ್ ಬ್ಯಾಪಾರಿ. ಪಶ್ಚಿಮ ಬಂಗಾಳದ ಮೊದಲ ದಲಿತ ಲೇಖಕ. ಜೈಲಿನಲ್ಲಿ ಅಕ್ಷರ ಕಲಿತು ಹತ್ತಕ್ಕೂ ಹೆಚ್ಚು ಕಾದಂಬರಿಗಳು ಮತ್ತು ನೂರಾರು ಸಣ್ಣ ಕತೆಗಳು ಹಾಗೂ ಅಧೋಲೋಕದ ಯಾತನೆ ಕುರಿತ ಆತ್ಮಕತೆ ಬರೆದಾತ.

ನೊಂದವರು ಅವಮಾನಿತರ ಅಮ್ಮನಾಗಿ ಅವರ ಬೆವರು ಕಣ್ಣೀರು ಅಪಮಾನಗಳು ಪ್ರತಿಭಟನೆಗಳಿಗೆ ಸಿಡಿಮದ್ದಿನಂತಹ ಅಕ್ಷರಗಳನ್ನು ತೊಡಿಸಿದವರು ಮಹಾಶ್ವೇತಾದೇವಿ. ವಿಶೇಷವಾಗಿ ಆದಿವಾಸಿಗಳು, ದಲಿತರ ಕಣ್ಣೀರು ಒರೆಸಿದ ದೀದಿ. ಈಕೆ ‘ಸ್ಪರ್ಶಿಸಿದ’ ಸೈಕಲ್ ರಿಕ್ಷಾ ತುಳಿವ ಪಾತಕಲೋಕದ ಹಿನ್ನೆಲೆಯ ದಲಿತನೊಬ್ಬ ಬಂಗಾಳಿ ಸಾಹಿತ್ಯ ಲೋಕ ಎದ್ದು ಕುಳಿತು ಗಮನಿಸುವ ಲೇಖಕನಾದ ವಿದ್ಯಮಾನ ಬೆರಗು ಬಡಿಸುವಂತಹುದು.

ಬದುಕು ಉಯ್ಯಾಲೆಯಾಡಿಸಿದ ಹಲವು ಏಳುಬೀಳುಗಳ ಸರಣಿಯ ನಂತರ ಜಾಧವಪುರದ ರೇಲ್ವೆ ಸ್ಟೇಷನ್ ಬಳಿ ರಿಕ್ಷಾ ತುಳಿವ ಉದ್ಯೋಗ. ಪಾತಕದ ಬದುಕು ಮುಂದೊಂದು ದಿನ ಜೈಲುವಾಸಕ್ಕೆ ದಾರಿ ಮಾಡಿತು. ಅಲ್ಲಿ ಮೋಸದ ಕೇಸಿನ ಬಂದಿಯೊಬ್ಬನಿಂದ ಬದುಕಿನ ಪಾಠ. ಮಣ್ಣಿನಲ್ಲಿ ಕಡ್ಡಿಯಿಂದ ಗೀಚಿ ಬಂಗಾಳಿ ಅಕ್ಷರ ಕಲಿಕೆ. ದಯಾಳು ಪೊಲೀಸರ ಸಹಕಾರ. ಓದು ಬರೆಹ ಎರಡೂ ದಕ್ಕಿದವು. ಜೈಲಿನಿಂದ ಬಿಡುಗಡೆಯಾದರೂ ಪುಸ್ತಕ ಓದುವ ನಶೆ ಬಿಡಲಿಲ್ಲ. ರದ್ದಿ ಅಂಗಡಿಯಿಂದ ತಂದ ಹಳೆಯ ನಿಯತಕಾಲಿಕಗಳು ಓದಿನ ಹಸಿವು ಹಿಂಗಿಸಲಿಲ್ಲ. ಕಾಡಿ ಬೇಡಿ ಪುಸ್ತಕ ಓದುವ ಚಟದ ನಡುವೆ ಒಮ್ಮೆ ರಿಕ್ಷಾ ಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಬಂದರೊಬ್ಬರು ಸವಾರಿ. ಮಹಾಶ್ವೇತಾದೇವಿ ಅಂದು ಬಾರದೆ ಹೋಗಿದ್ದರೆ ಬದುಕಿನ ಭಾಗ್ಯ ಬದಲಾಗುತ್ತಲೇ ಇರಲಿಲ್ಲ ಎಂದು ನೆನೆಯುತ್ತಾರೆ ಮನೋರಂಜನ್ ಬ್ಯಾಪಾರಿ. ಮಹಾಶ್ವೇತಾ ತಾಯಿಯ ಭೇಟಿಯ ನಂತರ ಲೇಖಕನಾಗಿ ತಾವು ‘ಮರುಹುಟ್ಟು’ ಪಡೆದೆನೆಂಬುದು ಅವರ ನಂಬಿಕೆ.

ಅವರು 2021ರಲ್ಲಿ ಬಂಗಾಳದ ಬಾಲಾಗಢ್ ಮೀಸಲು ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಪಾರ್ಟಿಯ ಶಾಸಕರಾಗಿಯೂ ಆಯ್ಕೆಯಾಗಿದ್ದರು.

ಆದಿವಾಸಿಗಳ ಅಕ್ಕ- ಅಮ್ಮನೆಂದೇ ಪ್ರೀತಿಯಿಂದ ಕರೆಯಿಸಿಕೊಂಡವರು ದಿವಂಗತ ಮಹಾಶ್ವೇತಾದೇವಿ. ಈ ಕುರಿತು ಪುಸ್ತಕಗಳನ್ನೇ ಬರೆಯಬಹುದು. ಆದರೆ, ಇಲ್ಲಿ ಸಣ್ಣದೊಂದು ಪ್ರಾತಿನಿಧಿಕ ತುಣುಕನ್ನು ಮಾತ್ರವೇ ನೀಡಬಹುದು. ‘ದೋಪ್ದಿ’ (ದ್ರೌಪದಿ) ಅವರ ಬಹುಚರ್ಚಿತ ಸಣ್ಣ ಕತೆ. ಅದರ ಕಥಾನಾಯಕಿಯ ಹೆಸರು ದೋಪ್ದಿ. 70ರ ದಶಕದ ಪಶ್ಚಿಮ ಬಂಗಾಳದ ‘ಸಜ್ಜನ ಕ್ರಾಂತಿಕಾರಿ’ಗಳೆಂದು ಕರೆಯಲಾದ ನಕ್ಸಲೀಯರ ಬೆಂಬಲಿಗ ಆದಿವಾಸಿ ದಂಪತಿಗಳ ಹೆಸರು ದೋಪ್ತಿ ಮತ್ತು ದುಲ್ನಾ ಮಾಝೀ. ‘ಸಜ್ಜನ ಕ್ರಾಂತಿಕಾರಿ’ಗಳಿಗೆ ಗುಪ್ತ ಮಾಹಿತಿ ಒದಗಿಸುವ ಪತಿ-ಪತ್ನಿ. ಆದಿವಾಸಿಗಳ ವಿರುದ್ಧ ದೌರ್ಜನ್ಯಗಳನ್ನು ಎಸಗಿದ ಬಲಿಷ್ಠ ಜಾತಿಯ ಭೂಮಾಲೀಕ ಸೂರ್ಯಕಾಂತ ಸಾಹುವಿನ ಹತ್ಯೆ ಸಂಬಂಧ ಇವರನ್ನು ಬಂಧಿಸಲಾಗುತ್ತದೆ. ದ್ರೌಪದಿಯನ್ನು ಚಿತ್ರಹಿಂಸೆ ಮತ್ತು ಅತ್ಯಾಚಾರಕ್ಕೆ ಗುರಿ ಮಾಡಲಾಗುತ್ತದೆ. ತನ್ನ ಸಹಚರರ ಹೆಸರು ವಿವರಗಳನ್ನು ಆಕೆ ಬಿಟ್ಟುಕೊಡುವುದಿಲ್ಲ. ಜರ್ಝರಿತ ರಕ್ತಸಿಕ್ತ ಬೆತ್ತಲು ದೇಹದ ಆಕೆಯನ್ನು ಸೇನಾಧಿಕಾರಿಯ ಮುಂದೆ ಹಾಜರುಪಡಿಸಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಭಾರತದಲ್ಲಿ ದ್ವೇಷವೆಂಬುದು ಹೇಗೆಲ್ಲ ಅಧಿಕಾರಸ್ಥರ ವ್ಯಾಕರಣ ಆಗಿ ಹೋಯಿತು!

ದೋಪ್ದಿಯ ಲೈಂಗಿಕ ಅವಯವಗಳು ಅತ್ಯಾಚಾರ ಮತ್ತು ಅಮಾನುಷ ಚಿತ್ರಹಿಂಸೆಯಿಂದ ಜರ್ಝರಿತಗೊಂಡಿರುತ್ತವೆ. ಕೈ ಕಾಲುಗಳ ಅಗಲಿಸಿ ಕಟ್ಟಿ ಹಾಕಿ ಇರುಳೆಲ್ಲ ಆಕೆಯ ‘ಒಡಲನ್ನು ಸೀಳಲಾಗಿರುತ್ತದೆ’. ಯಾತನೆಯಿಂದ ಮೂರ್ಛೆ ಎಚ್ಚರಗಳ ನಡುವೆ ಜೀಕುತ್ತ ಕಣ್ತೆರೆದಾಗ ಸಾವಿರ ಚಂದ್ರ ಸೂರ್ಯರು ಕಣ್ಣ ಮುಂದೆ ಗರಗರನೆ ತಿರುಗಿದಂತೆ…ಒಂದರ ನಂತರ ಮತ್ತೊಂದರಂತೆ ರಕ್ತಮಾಂಸದ ಪುರುಷದಂಡಗಳು ಆಕೆಯನ್ನು ಬಗೆಯುತ್ತಲೇ ಇರುತ್ತವೆ.

ರಕ್ತಸಿಕ್ತ ಬೆತ್ತಲು ದೇಹದ ಆಕೆಯನ್ನು ಬೆಳಕು ಹರಿದ ನಂತರ ಸೇನಾಧಿಕಾರಿಯ ಮುಂದೆ ಹಾಜರುಪಡಿಸಲಾಗುತ್ತದೆ. ಪುರುಷಾಧಿಪತ್ಯವು ಹೆಣ್ಣಿನ ಮೇಲೆ ಹೇರಿರುವ ಲಜ್ಜೆಯ ಒಜ್ಜೆಯನ್ನು ತಿರಸ್ಕರಿಸುವ ದೋಪ್ದಿ ಅದಮ್ಯವಾಗಿ ಗಹಗಹಿಸುತ್ತಾಳೆ. ದಶ ದಿಕ್ಪಾಲಕರು ಹೌಹಾರುವಂತೆ! ಮುರಿಯದ ಮನೋಬಲ ಆಕೆಯದು. ಅತ್ಯಾಚಾರ ಮತ್ತು ಬೆತ್ತಲನ್ನು ಹೆಣ್ಣನ್ನು ಪಳಗಿಸಲು ಬಳಸುತ್ತ ಬಂದಿದೆ ಪುರುಷನಿರ್ಮಿತಿ. ಪ್ರತಿಯಾಗಿ ಅದೇ ಬೆತ್ತಲನ್ನು, ತಿರಸ್ಕಾರಭರಿತ ನಗೆಯೊಂದಿಗೆ ಹರಿತ ಹತಾರಿನಂತೆ ಝಳಪಿಸುತ್ತಾಳೆ.

ಮಹಾಶ್ವೇತಾ ಅವರ ಈ ದೋಪ್ದಿ ಭಾರತ ದೇಶದ ಆದಿವಾಸಿ ಸಮುದಾಯದ ನೆನ್ನೆ-ಇಂದಿನ ವಾಸ್ತವ. ನಾಳೆಯೂ ಪರಿಸ್ಥಿತಿ ಬದಲಾಗುವ ಭರವಸೆ ಇಲ್ಲ. ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ಸಾವಿರಾರು ‘ದೋಪ್ದಿ’ಗಳಿಗೆ ಕಣ್ಣೀರಿಡುವವರು ಯಾರು?

ಹಜಾರ್ ಚೌರಾಶೀರ್ ಮಾ, ರುಡಾಲಿ, ಅರಣ್ಯೇರ್ ಅಧಿಕಾರ್ ಮುಂತಾದ ಅನೇಕ ಚಿರಸ್ಥಾಯೀ ಕೃತಿಗಳನ್ನು ಮಹಾಶ್ವೇತಾ ರಚಿಸಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಹಾಗೂ ಛತ್ತೀಸಗಢ ರಾಜ್ಯಗಳ ಆದಿವಾಸಿಗಳಿಗೆ ಗಂಟಲ ದನಿಯಾಗಿ ರೆಟ್ಟೆಯ ಕಸುವಾಗಿ ಬದುಕಿದ್ದ ಮಹಾತಾಯಿ.

ಭೌತಿಕವಾಗಿ ಬದುಕಿದ್ದಿದ್ದರೆ ಇದೇ ಜನವರಿ 14ಕ್ಕೆ ಆಕೆಗೆ 100 ವರ್ಷಗಳು ತುಂಬುತ್ತಿದ್ದವು.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...