ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ಭಾರತೀಯ ನರ್ಸ್ ನಿಮಿಷಾ ಪ್ರಿಯಾಳನ್ನು ಜುಲೈ 16ರಂದು ಯೆಮೆನ್‌ನಲ್ಲಿ ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಕೊಲೆ ಪ್ರಕರಣದಲ್ಲಿ ನಿಮಷಾ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.
38 ವರ್ಷದ ನಿಮಿಷಾಗೆ 2020ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ನಂತರ ಈ ತೀರ್ಪನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023ರಲ್ಲಿ ಎತ್ತಿಹಿಡಿದಿದೆ.
ಇದನ್ನು ಓದಿದ್ದೀರಾ? ಕೇರಳದ ನರ್ಸ್‌ಗೆ ಯೆಮನ್‌ನಲ್ಲಿ ಮರಣದಂಡನೆ; ಭಾರತ ಹೇಳಿದ್ದೇನು?
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದ್ದರು. ಅಲ್ಲಿ 2014ರಲ್ಲಿ ಸ್ಥಳೀಯ ನಿವಾಸಿ ತಲಾಲ್ ಅಬ್ದೋ ಮೆಹ್ದಿ ಜೊತೆ ಪಾಲುದಾರಿಕೆಯಲ್ಲಿ ಕ್ಲಿನಿಕ್ ಒಂದನ್ನು ತೆರೆದಿದ್ದರು. ಇದೀಗ ತಲಾಲ್ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿದ್ದಾರೆ.
ಏನಿದು ಪ್ರಕರಣ, ನಡೆದಿರುವುದೇನು?
2008ರಲ್ಲಿ ನಿಮಿಷಾ ಪ್ರಿಯಾ ಯೆಮೆನ್‌ಗೆ ತೆರಳಿದ್ದು ಹಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅಂತಿಮವಾಗಿ ತಮ್ಮದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. 2014ರಲ್ಲಿ ಸ್ಥಳೀಯ ನಿವಾಸಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡರು. ಯೆಮೆನ್‌ನಲ್ಲಿ ವಿದೇಶಿ ಪ್ರಜೆಗಳು ಸ್ಥಳೀಯ ಪಾಲುದಾರರನ್ನು ಹೊಂದಿರಬೇಕು ಎಂಬ ನಿಯಮವಿದೆ. ಆ ನಿಯಮಕ್ಕೆ ಅನುಗುಣವಾಗಿ ಸ್ಥಳೀಯ ನಿವಾಸಿ ತಲಾಲ್ ಅಬ್ದೋ ಮೆಹ್ದಿ ಜತೆ ಪಾಲುದಾರಿಕೆ ಮಾಡಿಕೊಂಡರು.
2016ರಲ್ಲಿ ನಿಮಿಷಾ ಮತ್ತು ಮಹ್ದಿ ನಡುವೆ ವೈಮನಸ್ಸು ಉಂಟಾಗಿದ್ದು, ಮಹ್ದಿ ವಿರುದ್ಧ ನಿಮಿಷಾ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಮಹ್ದಿಯನ್ನು ಬಂಧಿಸಲಾಗಿತ್ತು. ಮಹ್ದಿ ಬಿಡುಗಡೆಯಾದ ನಂತರ ನಿಮಿಷಾಗೆ ಕಿರುಕುಳ ಮತ್ತು ಬೆದರಿಕೆ ನೀಡುತ್ತಲೇ ಇದ್ದನು ಎಂದು ಆರೋಪಿಸಲಾಗಿದೆ.
2017ರಲ್ಲಿ ನಿಮಿಷಾ ಅವರ ಪಾಸ್‌ಪೋರ್ಟ್ ತಲಾಲ್ ಅಬ್ದೋ ಮಹ್ದಿ ಅನ್ನು ವಶಪಡಿಸಿಕೊಂಡು ಯೆಮೆನ್‌ನಿಂದ ನಿಮಿಷಾ ಹೊರಗೆ ಹೋಗಲು ಸಾಧ್ಯವಾಗದಂತೆ ತಡೆದಿದ್ದಾನೆ ಎಂದು ಆರೋಪಿಸಲಾಗಿದೆ. ನಿಮಿಷಾ ಪ್ರಿಯಾ ದಾಖಲೆಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮಹ್ದಿಗೆ ಮತ್ತು ಬರಿಸುವ ಇಂಜೆಕ್ಷನ್ ಚುಚ್ಚಿದ್ದಳು. ಆದರೆ ಆ ಡೋಸೇಜ್ ಅತಿಯಾಗಿದ್ದು, ಮಹ್ದಿ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ನಿಮಿಷಾ ಯೆಮೆನ್‌ನಿಂದ ಪರಾರಿಯಾಗಲು ಯತ್ನಿಸಿದ್ದು ಆಕೆಯನ್ನು ಬಂಧಿಸಲಾಗಿದೆ.
2018ರಲ್ಲಿ ನಿಮಿಷಾಳನ್ನು ಈ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಲಾಗಿದೆ. 2020ರಲ್ಲಿ ಮರಣದಂಡನೆ ವಿಧಿಸಲಾಗಿದೆ. ಈ ತೀರ್ಪನ್ನು ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಎತ್ತಿಹಿಡಿಡಿದೆ. ಈ ತೀರ್ಪಿಗೆ ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅನುಮೋದನೆ ನೀಡಿದ್ದಾರೆ. ಕ್ಷಮಾದಾನಕ್ಕೆ ಅವಕಾಶ ನೀಡಿದ್ದರೂ, ಕುಟುಂಬದೊಂದಿಗೆ ಇತ್ಯರ್ಥಪಡಿಸುವ ಪ್ರಯತ್ನ 2024ರ ಸೆಪ್ಟೆಂಬರ್‌ನಲ್ಲಿ ವಿಫಲವಾಗಿದೆ. ಇದೀಗ ನಿಮಿಷಾಗೆ ಮರಣದಂಡನೆ ಖಚಿತವಾಗಿದೆ.





