ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ‘ಮ್ಯಾಗ್ನೆಟೋ’ ಮಾಲ್‌ನಲ್ಲಿ ಕ್ರಿಸ್‌ಮಸ್ ಆಚರಣೆಯ ಅಲಂಕಾರವನ್ನು ಧ್ವಂಸ ಮಾಡಿದ್ದಕ್ಕಾಗಿ ಬಜರಂಗದಳದ ಆರು ಮಂದಿಯನ್ನು ಬಂಧಿಸಲಾಗಿತ್ತು. ಅವರಿಗೆ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದ್ದು, ಅವರನ್ನು ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಹಾರ-ತುರಾಯಿ ಹಾಕಿ ಸ್ವಾಗತಿಸಿ, ಸಂಭ್ರಮಿಸಿದ್ದಾರೆ.
ರಾಯ್‌ಪುರ ಜೈಲಿನಿಂದ ಆರೋಪಿಗಳು ಹೊರಬಂದ ಕೂಡಲೇ, ಅವರಿಗೆ ಬಜರಂಗದಳ ಕಾರ್ಯಕರ್ತರು ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದ್ದಾರೆ. ಹಿಂದುತ್ವದ ಘೋಷಣೆಗಳನ್ನು ಕೂಗಿದ್ದಾರೆ.
ಆರೋಪಿಗಳನ್ನು ಡಿಸೆಂಬರ್ 24ರಂದು ಬಂಧಿಸಲಾಗಿತ್ತು. ಅವರು ರಾಯ್‌ಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 29ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ನಿರಾಕರಿಸಿತ್ತು. ಬಳಿಕ, ಆರೋಪಿಗಳು ಸೆಷನ್ಸ್ ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ.
ಆರೋಪಿಗಳನ್ನು ಸ್ವಾಗತಿಸಿ ಸಂಭ್ರಮಿಸಿದ್ದನ್ನು ಸಮರ್ಥಿಸಿಕೊಂಡಿರುವ ಬಜರಂಗದಳದ ರಾಜ್ಯ ಮುಖ್ಯಸ್ಥ ರಿಷಿ ಮಿಶ್ರಾ, “ಮೆರವಣಿಗೆ ಮಾಡುವುದು, ಘೋಷಣೆ ಕೂಗುವುದರಲ್ಲಿ ತಪ್ಪೇನಿದೆ. ಛತ್ತೀಸ್‌ಗಢದಲ್ಲಿ ಕ್ರಿಶ್ಚಿಯನ್ನರು ಧಾರ್ಮಿಕ ಮತಾಂತರ ಮಾಡಿದ್ದಾರೆ, ಅವರ ವಿರುದ್ಧ ಘೋಷಣೆ ಕೂಗುವುದು ತಪ್ಪಲ್ಲ” ಎಂದಿದ್ದಾರೆ.
ಘಟನೆಯ ವಿವರ
ಡಿಸೆಂಬರ್ 24ರ ರಾತ್ರಿ ಶಸ್ತ್ರಸಜ್ಜಿತ ಗುಂಪು ‘ಮ್ಯಾಗ್ನೆಟೋ’ ಮಾಲ್‌ಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿತು. ಮಾಲ್‌ನಲ್ಲಿ ಸಾಂಟಾ ಕ್ಲಾಸ್, ಹಿಮಸಾರಂಗ, ಜಾರುಬಂಡಿ ಮತ್ತು ಹಿಮ ಮಾನವರ ಪ್ರತಿಮೆಗಳನ್ನು ಆರೋಪಿಗಲನ್ನು ನಾಶಮಾಡಿದ್ದರು.
ಘಟನೆ ಸಂಬಂಧಿಸಿದಂತೆ ತೆಲಿಬಂಧ ಪೊಲೀಸ್ ಠಾಣೆಯಲ್ಲಿ 30-40 ಅಪರಿಚಿತರ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳು 331(3), 324(2), 115(2), 191(2) ಹಾಗೂ 190ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಆರೋಪಿಗಳ ಬಂಧನವನ್ನು ವಿರೋಧಿಸಿ ಉದ್ರಿಕ್ತ ಬಜರಂಗದಳದ 300ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಜಮಾಸಿ ದಾಂಧಲೆ ನಡೆಸಿದ್ದರು. ಸುಮಾರು 9 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದ್ದರು. ಆದಾಗ್ಯೂ, ಆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.




