ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ (ಜ.10) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, “ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ದಾಖಲೆಗಳನ್ನು ಸರಿಪಡಿಸುವ ಬದಲು ಮತದಾರರನ್ನು ಹೊರಗಿಡುವ ಒಂದು ಕಸರತ್ತಾಗಿ ಪರಿವರ್ತಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಎಸ್‌ಐಆರ್ ಆರಂಭವಾದಾಗಿನಿಂದ ಚುನಾವಣಾ ಆಯೋಗಕ್ಕೆ ಮೂರು ಪತ್ರಗಳನ್ನು ಬರೆದಿದ್ದಾರೆ. ತಮ್ಮ ಮೂರನೇ ಪತ್ರದಲ್ಲಿ, ಮಮತಾ ಬ್ಯಾನರ್ಜಿ ಅವರು “ಚುನಾವಣಾ ಆಯೋಗವು ರಾಜಕೀಯ ಪಕ್ಷಪಾತ, ಸಂವೇದನಾಶೀಲತೆ ಮತ್ತು ವಿಚಾರಣೆಯ ಸಮಯದಲ್ಲಿ ಅತಿರೇಕದಿಂದ ವರ್ತಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಎಸ್ಐಆರ್ ಗುರಿ ಮತದಾರರ ಪಟ್ಟಿಯ ತಿದ್ದುಪಡಿ ಅಥವಾ ಸೇರ್ಪಡೆಯ ರೀತಿ ಕಾಣುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ಹೆಸರನ್ನು ಅಳಿಸುವಿಕೆ ಅಥವಾ ಮತದಾರರನ್ನು ಹೊರಗಿಡುವ ಕೆಲಸ ನಡೆಯುತ್ತಿದೆ. ಈ ಪ್ರಕ್ರಿಯೆಯಿಂದ ಸಾಂವಿಧಾನಿಕ ಮೌಲ್ಯಗಳು ದುರ್ಬಲಗೊಳ್ಳುತ್ತವೆ” ಎಂದು ದೂರಿದ್ದಾರೆ.
ಪತ್ರದ ಕೊನೆಯಲ್ಲಿ, “ನೀವು ಉತ್ತರಿಸುವುದಿಲ್ಲ ಅಥವಾ ಸ್ಪಷ್ಟನೆ ನೀಡುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಿಮಗೆ ತಿಳಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ v/s ಎಸ್ಐಆರ್
ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕಳೆದ ವರ್ಷ ಬಿಹಾರದಿಂದ ಆರಂಭ ಮಾಡಿ, ದೇಶದಲ್ಲಿನ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಿದೆ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ‘ಒಬ್ಬ ಮತದಾರರ ಹೆಸರನ್ನೂ ಕೈಬಿಟ್ಟರೆ ಚುನಾವಣಾ ಆಯೋಗದ ಕೇಂದ್ರ ಕಚೇರಿ ಮುಂದೆ ನಾನೀರುವೆ’ ಎಂದು ಮಮತಾ ಬ್ಯಾನರ್ಜಿ ಅವರು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಎಸ್ಐಆರ್ ಗೆ ಬಳಕೆಯಾಗಿರುವ ಅಪ್ಲಿಕೇಷನ್ ಅನ್ನು ಬಿಜೆಪಿಯ ಐಟಿ ಸೆಲ್ ತಯಾರಿಸಿದ್ದು ಎಂಬ ಗಂಭೀರ ಆರೋಪವನ್ನು ಮಾಡಿದ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
“ಎಸ್ಐಆರ್ ನಿಂದಾಗಿ ಹಲವಾರು ‘ಬಿಎಲ್ಓ’ಗಳು ಸಾವನ್ನಪ್ಪಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ‘ಬಿಎಲ್ಓ’ಗಳನ್ನು ನಡೆಸಿಕೊಂಡ ರೀತಿಯ ವಿರುದ್ಧ ಕೋರ್ಟ್ ಮೊರೆ ಹೋಗುತ್ತೇವೆ” ಎಂದು ಹೇಳಿದ್ದರು.
ಡಿಸೆಂಬರ್ 16ರಂದು ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತದ ಪಶ್ಚಿಮ ಬಂಗಾಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಇದರಲ್ಲಿ 58 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊರಗಿಡಲಾಯಿತು. 7.66 ಕೋಟಿಯಿದ್ದ ಮತದಾರರ ಸಂಖ್ಯೆ 7.08 ಕೊಟಿಗೆ ಇಳಿದಿತ್ತು.
ಬಿಜೆಪಿ v/s ಟಿಎಂಸಿ
ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿನ ಇಂಡಿಯನ್ ಪೊಲಿಟಿಕ್ ಆ್ಯಕ್ಷನ್ ಕಮಿಟಿ (ಐ-ಪ್ಯಾಕ್) ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ‘ಪ್ರತೀಕ್ ಜೈನ್’ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಐಟಿ ವಿಭಾಗ ಮುಖ್ಯಸ್ಥರು ಹೌದು.
‘ಇ.ಡಿ ಅಧಿಕಾರಿಗಳು ನಮ್ಮ ಐಟಿ ಸೆಲ್ ಉಸ್ತುವಾರಿಯ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಮತ್ತು ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು’ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ನಾಲ್ಕು ವರ್ಷಗಳ ಹಿಂದಿನ ಅಕ್ರಮ ಹಣ ವರ್ಗಾವಣೆಯ ಆಧಾರದ ಮೇಲೆ ಈ ದಾಳಿಯನ್ನು ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಇದೇ ದಾಳಿ ರಾಜಕೀಯ ಹೋರಾಟಕ್ಕೆ ಹಾಗೂ ಟಿಎಂಸಿ ಆಕ್ರೋಶಕ್ಕೆ ಕಾರಣವಾಗಿದೆ.
ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಬಂದು ಪಕ್ಷಕ್ಕೆ ಸಂಬಂಧಿಸಿದ್ದು ಎಂದು ಹೇಳಿಕೊಳ್ಳುವ ಅನೇಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. “ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ನಾನು ಅವುಗಳನ್ನು ಮನೆಯಿಂದ ಹೊರತಂದಿದ್ದೇನೆ” ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ನೇರವಾಗಿ ಅಮಿತ್ ಶಾ ಅವರೇ ಕಾರಣ. ಅವರು ಅತ್ಯಂತ ಕೆಟ್ಟ ಗೃಹ ಮಂತ್ರಿ” ಎಂದು ದೂರಿದ್ದಾರೆ.
“ಮುಂದಿನ ವಿಧಾನಸಭೆ ಚುನಾವಣೆಯ ಎಲ್ಲಾ ಕಾರ್ಯತಂತ್ರಗಳು ಹಾಗೂ ಅಭ್ಯರ್ಥಿಗಳ ವಿವರಗಳು ಐ-ಪ್ಯಾಕ್ ಕಚೇರಿಯಲ್ಲಿದ್ದವು. ಅವುಗಳನ್ನು ಕದಿಯುವ ಉದ್ದೇಶದಿಂದಲೇ ಇ.ಡಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಕಳೆದ ಹನ್ನೊಂದು ವರ್ಷಗಳಿಂದ ಬಿಜೆಪಿಯು ಚುನಾವಣಾ ಆಯೋಗವನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿದೆ ಎಂಬ ಆರೋಪಗಳಿವೆ. ಅದೇ ರೀತಿಯಲ್ಲಿ ಇ.ಡಿ, ಐಟಿ, ಸಿಬಿಐ ಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ಅಸ್ಥಿತ್ವವನ್ನು ಕಸಿದುಕೊಳ್ಳುತ್ತಿದೆ.
ಈಗ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಇ.ಡಿ ನಡೆಸಿರುವ ದಾಳಿ ಮತ್ತು ಅದರ ಸಮಯವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ, “ಇ.ಡಿ ರಾಜಕೀಯ ಪ್ರೇರಿತವಾಗಿ ದಾಳಿ ನಡೆಸಿದೆ. ಬರುವ ಚುನಾವಣೆಯನ್ನು ಗೆಲ್ಲಲು ಬಿಜೆಪಿಯವರು ‘ವಾಮಮಾರ್ಗ’ವನ್ನು ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಒಂದು ಕಡೆ ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್, ಮತ್ತೊಂದು ಕಡೆ ಇ.ಡಿ ಮತ್ತು ಬಿಜೆಪಿ. ಇವೆರಡನ್ನು ಒಟ್ಟಿಗೆ ಎದುರು ಹಾಕಿಕೊಂಡಿರುವ ಮಮತಾ ಬ್ಯಾನರ್ಜಿ ಅವರ ಹೋರಾಟ ಗೆಲ್ಲಬಹುದೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.





