ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅತೀ ದೊಡ್ಡ ಹಗರಣವಾಗಿದೆ. ಎಸ್‌ಐಆರ್‌ನ ಅಂತಿಮ ಮತಪಟ್ಟಿಯಿಂದ ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಕೈಬಿಟ್ಟರೂ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಘೋರಾವ್ ಹಾಕಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. “ಎಸ್‌ಐಆರ್ ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ನಡೆಸಲಾಗುತ್ತಿರುವ ಅತೀ ದೊಡ್ಡ ಹಗರಣ. ಎಸ್‌ಐಆರ್ ಹೆಸರಿನಲ್ಲಿ ರಾಜ್ಯದ ಜನರನ್ನು ಹಿಂಸಿಸಲಾಗುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯಿಂದಾಗಿ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಾಖಲೆ ಪರಿಶೀಲನೆ ವೇಳೆ ವಿಚಾರಣೆಗೆ ವೃದ್ಧರನ್ನು ಕರೆಯಲಾಗುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಂತಿಮ ಪಟ್ಟಿಯಿಂದ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೂ ಸಹ, ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಟಿಎಂಸಿ ಘೇರಾವ್ ಹಾಕುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
“ಎಸ್‌ಐಆರ್ ಮೂಲಕ ನೀಡಲಾಗುತ್ತಿರುವ ಕಿರುಕುಳವನ್ನು ರಾಜ್ಯದ ಜನರು ಸಹಿಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನರು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ. ಚುನಾವಣೆ ಬಂದಾಗಲೆಲ್ಲಾ ‘ಸೋನಾರ್ ಬಾಂಗ್ಲಾ’ ನಿರ್ಮಿಸುವುದಾಗಿ ಬಿಜೆಪಿ ಭರವಸೆ ನೀಡುತ್ತದೆ. ಆದರೆ, ವಾಸ್ತವದಲ್ಲಿ, ತನ್ನ ಆಳುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರನ್ನು ಬಿಜೆಪಿ ಹಿಂಸಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಡಿಸೆಂಬರ್ 16 ರಂದು ಪ್ರಕಟವಾದ ಕರಡು ಪಟ್ಟಿ ಪ್ರಕಟವಾಗಿದ್ದು, ಒಟ್ಟು 7.6 ಕೋಟಿ ಮತದಾರರಲ್ಲಿ, 58 ಲಕ್ಷಕ್ಕೂ ಹೆಚ್ಚು ಮತದಾರರನ್ನು ಅಳಿಸಲಾಗಿದೆ. ಅಲ್ಲದೆ, ಸುಮಾರು 1.66 ಕೋಟಿ ಮತದಾರರ ‘ಪ್ರಾಮಾಣಿಕತೆ’ಯ ಬಗ್ಗೆ ಚುನಾವಣಾ ಆಯೋಗವು ಅನುಮಾನ ವ್ಯಕ್ತಪಡಿಸಿದೆ. ಅವರನ್ನು ಮತ್ತೆ ತಮ್ಮ ದಾಖಲೆಗಳನ್ನು ಪರಿಶೀಲಿಸಲು ವಿಚಾರಣೆಗೆ ಕರೆದಿದೆ.




