ಯುವಕನೊಬ್ಬ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದು, ಆತನನ್ನು ಮದುವೆಯಾಗಲು ಆತನ ಸಂಬಂಧಿಕ ಯುವತಿ ನಿರಾಕರಿಸಿದ್ದಾರೆ. ಆ ಕಾರಣಕ್ಕೆ, ಕುಪಿತಗೊಂಡ ಯುವಕ ತನ್ನದೇ ಎಚ್‌ಐವಿ ಪೀಡಿತ ರಕ್ತವನ್ನು ಸಿರಿಂಜ್ ಮೂಲಕ ಯುವತಿಗೆ ಚುಚ್ಚಿರುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 11ರಂದು, ಹೈದರಾಬಾದ್‌ನ ಪೋಚಾರಂ ಐಟಿ ಕಾರಿಡಾರ್ ಪ್ರದೇಶದಲ್ಲಿರುವ ಯುವತಿಯ ಫ್ಲಾಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಅಲ್ಲಿಗೆ ಬಂದ ಆರೋಪಿ, ಯಾವುದೇ ಪ್ರಚೋದನೆಯಿಲ್ಲದೆ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಸಿರಿಂಜ್ ತೆಗೆದು ಅವಳ ಮುಂಗೈಗೆ ಚುಚ್ಚಿದ್ದಾನೆ. “ಸಿರಿಂಜ್‌ನಲ್ಲಿದ್ದ ರಕ್ತವನ್ನು ಅವಳ ದೇಹಕ್ಕೆ ಸೇರಿಸಿದ ನಂತರ, ‘ನಾನು ನಿನಗೆ ನನ್ನ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದೇನೆ’ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ,” ಎಂದು ಇನ್ಸ್‌ಪೆಕ್ಟರ್ ಬಿ. ರಾಜು ತಿಳಿಸಿದ್ದಾರೆ.
ಆರಂಭದಲ್ಲಿ ಈ ವಿಷಯವನ್ನು ಯುವತಿ ಮನೆಯವರಿಗೆ ತಿಳಿಸಿರಲಿಲ್ಲ. ಆದರೆ, ಮಾರನೇ ದಿನ ಆಕೆಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ, ಮಾರ್ಚ್ 13ರಂದು ಕುಟುಂಬಸ್ಥರು ಅವಳನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ವೈದ್ಯರು ಮುಂಗೈ ಮೇಲಿದ್ದ ರಕ್ತದ ಕಲೆ ಮತ್ತು ಗುರುತನ್ನು ಕಂಡು ಪ್ರಶ್ನಿಸಿದ್ದಾರೆ. ಆಗ ಕುಟುಂಬದವರ ಸಮ್ಮುಖದಲ್ಲಿ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಶುಕ್ರವಾರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. “ನಾವು ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಗಾಂಧಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ರಕ್ತ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಲು ಕನಿಷ್ಠ ಮೂರು ತಿಂಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
ಮೆಡಿಪಲ್ಲಿ ಎಸಿಪಿ ಬಿ. ಮೋಹನ್ ಕುಮಾರ್ ನೀಡಿರುವ ಮಾಹಿತಿಯಂತೆ, ಆರೋಪಿಯ ತಂದೆ (ಆಟೋ ಚಾಲಕ) ಸುಮಾರು 19 ವರ್ಷಗಳ ಹಿಂದೆ ಏಡ್ಸ್‌ನಿಂದ ಸಾವನ್ನಪ್ಪಿದ್ದರು. ತಾಯಿ ಕೂಡ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಆರೋಪಿ ಯುವಕನಿಗೂ ಹುಟ್ಟಿನಿಂದಲೇ ಎಚ್‌ಐವಿ ವೈರಸ್ ತಗುಲಿತ್ತು ಎಂದು ತಿಳಿದುಬಂದಿದೆ.
“2025ರ ಸೆಪ್ಟೆಂಬರ್‌ವರೆಗೆ ಎರಡೂ ಕುಟುಂಬಗಳು ಇವರ ಮದುವೆಗೆ ಒಪ್ಪಿದ್ದವು. ಆದರೆ, ಯುವಕನ ಪೋಷಕರು ಎಚ್‌ಐವಿ ಸೋಂಕಿಗೆ ತುತ್ತಾಗಿದ್ದರು ಎಂಬುದನ್ನು ಅರಿತಿದ್ದ ಯುವತಿಯ ಕುಟುಂಬವು, ಯುವಕನನ್ನು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿತ್ತು. “ಪರೀಕ್ಷೆಯಲ್ಲಿ ಆತನಿಗೆ ಎಚ್‌ಐವಿ ಇರುವುದು ದೃಢಪಟ್ಟಿದ್ದರಿಂದ ಮದುವೆ ರದ್ದಾಗಿತ್ತು. ಅಂದಿನಿಂದ ಯುವತಿಯೂ ಅವನನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದರು,” ಎಂದು ಎಸಿಪಿ ತಿಳಿಸಿದ್ದಾರೆ.
ಬಂಧಿತ ಆರೋಪಿಯು ಮದುವೆಗೆ ಒಪ್ಪುವಂತೆ ಪದೇ ಪದೇ ಅವಳ ಮೇಲೆ ಒತ್ತಡ ಹೇರುತ್ತಿದ್ದ. ಒಂದು ವೇಳೆ ಆಕೆಗೂ ಸೋಂಕು ತಗುಲಿದರೆ, ಆಕೆಯ ಕುಟುಂಬಸ್ಥರು ಮದುವೆಗೆ ಅಡ್ಡಿಪಡಿಸುವುದಿಲ್ಲ ಎಂದು ಭಾವಿಸಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




