ಹೋಟೆಲ್ ಕೋಣೆಯಲ್ಲಿ ತನ್ನ 6 ವರ್ಷದ ಮಗನನ್ನು ಥಳಿಸಿ ಕೊಂದು ತಂದೆ ಪರಾರಿಯಾಗಿರುವ ಘಟನೆ ಬಿಹಾರದ ಪಟನಾದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಮಗನನ್ನು ನೆಲದ ಮೇಲೆ ಎತ್ತಿ ಎಸೆದಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಪ್ರಭಾಕರ್ ಮಹೋಟೊ ತನ್ನ ಮಗ ಸನ್ನಿ (6)ಯನ್ನು ಕೊಂದು ಪರಾರಿಯಾಗಿದ್ದಾನೆ.
ಇದನ್ನು ಓದಿದ್ದೀರಾ? ಅಸ್ಸಾಂ | ಕರುಳ ಕುಡಿಯನ್ನು 50 ಸಾವಿರ ರೂ.ಗೆ ಮಾರಿದ 22 ವರ್ಷದ ಮಹಿಳೆ: ಆಶಾ ಕಾರ್ಯಕರ್ತರೂ ಭಾಗಿ ಶಂಕೆ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (SDPO)ಸದರ್-1, ಅಭಿನವ್, “ಪಟನಾ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೋಣೆಯೊಳಗೆ ಆರು ವರ್ಷದ ಮಗನನ್ನು ತಂದೆ ಥಳಿಸಿದ್ದಾನೆ ಎಂದು ಭಾನುವಾರ ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ” ಎಂದು ಹೇಳಿದ್ದಾರೆ.
“ಶನಿವಾರ ರಾತ್ರಿ ನನ್ನ ಮತ್ತು ಗಂಡನ ನಡುವೆ ಜಗಳವಾಗಿದೆ. ಈ ವೇಳೆ ಪತಿ ಸಿಟ್ಟಿನಲ್ಲಿ ನಮ್ಮ ಆರು ವರ್ಷದ ಮಗನನ್ನು ಕ್ರೂರವಾಗಿ ಥಳಿಸಿದರು. ಮಗನನ್ನು ಮೇಲಕ್ಕೆ ಎತ್ತಿ ನೆಲದ ಮೇಲೆ ಎಸೆದಿದ್ದಾರೆ” ಎಂದು ಬಾಲಕನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಇದಾದ ಬಳಿಕ ಪತಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ. ದಂಪತಿ ತಮ್ಮ ಮಗನೊಂದಿಗೆ ಪಟನಾಗೆ ಬಂದಿದ್ದರು. ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೋಣೆಯಲ್ಲಿ ತಂಗಿದ್ದರು ಎಂದು ವರದಿಯಾಗಿದೆ.





