ಮಣಿಪುರ ದ ಟೆಂಗ್ನೌಪಾಲ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಲೀಥು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
“ಮ್ಯಾನ್ಮಾರ್‌ಗೆ ತೆರಳುತ್ತಿದ್ದ ಉಗ್ರಗಾಮಿಗಳ ಗುಂಪನ್ನು ಇದೇ ಪ್ರದೇಶದಲ್ಲಿ ಪ್ರಬಲವಾಗಿರುವ ಮತ್ತೊಂದು ಗುಂಪಿನ ಬಂಡುಕೋರರು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದಾಗ ಹಿಂಸಾಚಾರ ಸಂಭವಿಸಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸ್ಥಳಕ್ಕಾಗಮಿಸಿದ ಭದ್ರತಾ ಪಡೆಗಳು ಇದುವರೆಗೆ 13 ಶವಗಳನ್ನು ಪತ್ತೆ ಮಾಡಿದ್ದು, ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಅವರು ಸ್ಥಳೀಯರಲ್ಲ ಎಂದು ತಿಳಿಸಿದ್ದಾರೆ.
ಮೃತರು ಲೀಥು ಪ್ರದೇಶದವರಲ್ಲ ಎಂದು ತೋರುತ್ತಿದೆ. ಅವರು ಬೇರೆ ಸ್ಥಳದಿಂದ ಬಂದಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? 2022 ರಲ್ಲಿ ದೇಶದಲ್ಲಿ 28,522 ಕೊಲೆ ಪ್ರಕರಣಗಳು ದಾಖಲು
ಮೊಬೈಲ್ ಇಂಟರ್ನೆಟ್ ಮರುಸ್ಥಾಪನೆ
ಏತನ್ಮಧ್ಯೆ, ಮಣಿಪುರ ಸರ್ಕಾರವು ಭಾನುವಾರ(ಡಿ.2)ರಿಂದ ಡಿಸೆಂಬರ್ 18 ರವರೆಗೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ ಎಂದು ಅಧಿಸೂಚನೆ ತಿಳಿಸಿದೆ.
“ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಮತ್ತು ಮೊಬೈಲ್ ಇಂಟರ್ನೆಟ್ ನಿಷೇಧದಿಂದ ಜನರು ಎದುರಿಸುತ್ತಿರುವ ಅನಾನುಕೂಲತೆಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಅಮಾನತುಗೊಳಿಸುವಿಕೆಯನ್ನು ಸಡಿಲಿಸಲು ನಿರ್ಧರಿಸಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.





