ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮಾತುಕತೆಯಲ್ಲಿ ತೊಡಗಿದ್ದ 59 ವರ್ಷದ ಬುಡಕಟ್ಟು ನಾಯಕನನ್ನು ಕೊಲ್ಲಲಾಗಿದೆ. ಮೃತದೇಹವು ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗಿದೆ. ಕುಕಿ ಉಗ್ರಗಾಮಿ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಐದು ಜನರು ಬುಡಕಟ್ಟು ನಾಯಕನನ್ನು ಅಪಹರಿಸಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಥಡೌ ಬುಡಕಟ್ಟು ಪ್ರತಿನಿಧಿಗಳು ಮತ್ತು ಮೈತೇಯಿ ನಾಗರಿಕ ಗುಂಪುಗಳ ನಡುವೆ ಇಂಫಾಲ್‌ನಲ್ಲಿ ಆಗಸ್ಟ್ 16ರಂದು ನಡೆದ ಸಭೆಯಲ್ಲಿ ಬುಡಕಟ್ಟು ನಾಯಕ ನೆಹ್ಕಮ್ ಜೊಮ್ಹಾವೊ ಅವರು ಭಾಗವಹಿಸಿದ್ದರು. ಕಳೆದ ವರ್ಷ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿಗೆ ನಡೆದ ಸಭೆ ಇದಾಗಿತ್ತು.
“ಜೊಮ್ಹಾವೊ ಅವರ ಶವವನ್ನು ಗುರುವಾರ ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಕರ್ಬಿ ಅಂಗ್ಲಾಂಗ್) ಸಂಜಿಬ್ ಕುಮಾರ್ ಸೈಕಿಯಾ ತಿಳಿಸಿದ್ದಾರೆ.
ಇದನ್ನೂ ಓದಿರಿ: ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿಯ ಮನೆಗೆ ಕಳಿಸಿದ ಮಕ್ಕಳ ಕಲ್ಯಾಣ ಸಮಿತಿ; ಮತ್ತೆ ದೌರ್ಜನ್ಯ
ಅಸ್ಸಾಂನ ಥಡೌ ಲಿಟರರಿ ಸೊಸೈಟಿಯ ಅಧ್ಯಕ್ಷ ಜೊಮ್ಹಾವೊ ಅವರು ಮಂಜಾದಲ್ಲಿರುವ ತಮ್ಮ ನಿವಾಸದಿಂದ ಕಳೆದ ಶನಿವಾರ ನಾಪತ್ತೆಯಾಗಿದ್ದರು. ಅವರ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾದ ಐದು ಜನರು ‘ಕುಕಿ ಕ್ರಾಂತಿಕಾರಿ ಸೇನೆ'(ಕೆಆರ್‌ಎ)ಗೆ ಸೇರಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಕಾರ್ಯಾಚರಣೆಗಳ ಅಮಾನತು (ಎಸ್‌ಒಒ) ಒಪ್ಪಂದಕ್ಕೆ ಕೆಆರ್‌ಎ ಸಹಿ ಹಾಕಿತ್ತು.
ಜೊಮ್ಹಾವೊ ಅವರನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲ್ಲಲಾಗಿದೆ. ಬಳಿಕ ಅವರ ಶವವನ್ನು ನದಿಯಲ್ಲಿ ಎಸೆಯಲಾಗಿತ್ತು. ವ್ಯಾಪಕ ಹುಡುಕಾಟದ ನಂತರ ಶವ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ನಮ್ಮ ಕೇಡರ್‌ಗಳೇ ಈ ಹತ್ಯೆಗೆ ಕಾರಣ” ಎಂದು ಕೆಆರ್‌ಎ ಒಪ್ಪಿಕೊಂಡಿದೆ. “ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ” ಎಂದು ಸಂಘಟನೆ ಪ್ರತಿಕ್ರಿಯಿಸಿದೆ.
ಕೆಆರ್‌ಎ ಪ್ರಧಾನ ಕಾರ್ಯದರ್ಶಿ ಎಲ್‌ಎಸ್ ಗ್ಯಾಂಗ್ಟೆ ಹೇಳಿಕೆ ನೀಡಿದ್ದು, “ಗುಂಪಿನ ನಾಯಕತ್ವದ ಗಮನಕ್ಕೆ ಬಾರದೆ ಅಥವಾ ಅನುಮತಿಯಿಲ್ಲದೆ ಕೊಲೆಯನ್ನು ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.
“ಕೆಡರ್‌ಗಳು ಭಾವನಾತ್ಮಕ ಪ್ರಚೋದನೆಯಿಂದ ತಮ್ಮದೇ ಆದ ರೀತಿ ವರ್ತಿಸಿದ್ದಾರೆ. ಅಂತಹ ಕ್ರಮಗಳನ್ನು ಸಂಘಟನೆಯು ಎಂದಿಗೂ ಅನುಮತಿಸುವುದಿಲ್ಲ. ನಾವು ನೈತಿಕ ಜವಾಬ್ದಾರಿಯನ್ನು ಹೊರುತ್ತೇವೆ. ದುಃಖಿತ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇವೆ. ಎಲ್ಲಾ ಐವರು ಕಾರ್ಯಕರ್ತರನ್ನು ಗುಂಪಿನಿಂದ ಅಮಾನತುಗೊಳಿಸುತ್ತೇವೆ” ಎಂದು ಗ್ಯಾಂಗ್ಟೆ ಹೇಳಿದ್ದಾರೆ.
ಇದನ್ನೂ ಓದಿರಿ: ಇಂದೋರ್ ಆಸ್ಪತ್ರೆಯಲ್ಲಿ ಇಲಿ ಕಡಿತದಿಂದ ನವಜಾತ ಶಿಶುಗಳ ಸಾವು: ಇದು ‘ಕೊಲೆ’ ಎಂದ ರಾಹುಲ್ ಗಾಂಧಿ
“ಈ ಘಟನೆಯು ಸಾಂಸ್ಥಿಕ ಶಿಸ್ತು ಮತ್ತು ಹೊಣೆಗಾರಿಕೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಆದ್ದರಿಂದ, ನ್ಯೂನತೆಗಳನ್ನು ಗುರುತಿಸಿ, ಸರಿಪಡಿಸಲು ಆಂತರಿಕ ಪರಿಶೀಲನೆಯನ್ನು ನಡೆಸಲಾಗುವುದು” ಎಂದಿದ್ದಾರೆ.
ಹತ್ಯೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಥಡೌ ಇನ್ಪಿ ಮಣಿಪುರ, ಥಡೌ ವಿದ್ಯಾರ್ಥಿ ಸಂಘ ಮತ್ತು ಥಡೌ ಸಮುದಾಯ ಅಂತಾರಾಷ್ಟ್ರೀಯ ಸೇರಿದಂತೆ ಹಲವು ಬುಡಕಟ್ಟು ಸಂಘಟನೆಗಳು ಹತ್ಯೆಯನ್ನು ಖಂಡಿಸಿವೆ.





