ಕುಟುಂಬದ ದೂರದ ಸಂಬಂಧಿಯನ್ನು ಮದುವೆಯಾಗಲು ಬಯಸಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಹತ್ಯೆಗೈದಿರುವ ‘ಮರ್ಯಾದೆಗೇಡು ಹತ್ಯೆ’ ಪ್ರಕರಣ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಯುವತಿಗೆ ವಿದ್ಯುತ್ ಸ್ಪರ್ಶಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೊಂಡಾ ಜಿಲ್ಲೆಯ ಥೋರ್ಹಾನ್ಸ್ ಗ್ರಾಮದಲ್ಲಿ ಘಟನೆ ನಡೆದಿದೆ. ಅಪರಿಚಿತರೊಬ್ಬರು 112ಗೆ ಕರೆ ಮಾಡಿದ್ದು, ಗ್ರಾಮದಲ್ಲಿ ಯುವತಿಯ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
“ಶ್ವಾನ ದಳದ ಸಹಾಯದಿಂದ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯು ಆಕೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಿದೆ. ಆ ವರದಿ, ಇತರ ಸಾಕ್ಷ್ಯಗಳು ಮತ್ತು ಯುವತಿಯ ಭಾವಿ ಪತಿ ಪರಮೇಶ್ವರ ಪಾಠಕ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಯುವತಿಯ ತಂದೆ ಚಂದ್ರ ಪ್ರಕಾಶ್ ಮತ್ತು ಸಹೋದರ ರಾಹುಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ” ಎಂದು ಜೈಸ್ವಾಲ್ ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಂದು ಸಿದ್ಧಾರ್ಥ, ಇಂದು ರಾಯ್; ಸಾಲು ಸಾಲು ಉದ್ಯಮಿಗಳ ಆತ್ಮಹತ್ಯೆ ಹಿಂದಿರುವ ಸತ್ಯವೇನು?
“ಯುವತಿಯು ತನ್ನ ತಂದೆ ಮತ್ತು ಸಹೋದರನ ಇಚ್ಛೆಗೆ ವಿರುದ್ಧವಾಗಿ ದೂರದ ಸಂಬಂಧಿ ಪಾಠಕ್ ಅವರನ್ನು ಮದುವೆಯಾಗಲು ಉದ್ದೇಶಿಸಿದ್ದರು. ಜನವರಿ 30 ರಂದು, ಊರು ತೊರೆಯಲು ನಿರ್ಧರಿಸಿದ್ದರು. ಅದನ್ನು ಅರಿತ ಆರೋಪಿಗಳು ಆಕೆಯನ್ನು ಕೋಣೆಯಲ್ಲಿ ಬಂಧಿಸಿದ್ದಾರೆ. ಆಕೆಯ ಕೈಕಾಲುಗಳನ್ನು ಕಟ್ಟಿ, ಆಕೆಯ ಬಾಯಿಯನ್ನು ಮುಚ್ಚಿ, ವಿದ್ಯುತ್ ಕೇಬಲ್‌ನಿಂದ ವಿದ್ಯುತ್ ಸ್ಪರ್ಷಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಪರಮೇಶ್ವರ್ ಪಾಠಕ್ ಅವರು ತನಗೆ ಯುವತಿ ಬರೆದ ಹಲವಾರು ಪತ್ರಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಅದರಲ್ಲಿ; ಆಕೆ ತನ್ನ ತಂದೆ ಮತ್ತು ಸಹೋದರನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಯುವತಿಯ ಮೃತದೇಹದ ಬಳಿ ಇಸ್ತ್ರಿ ಯಂತ್ರವನ್ನು ಇಟ್ಟು, ಘಟನೆಯು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ, ತನಿಖೆಯಲ್ಲಿ ಸತ್ಯ ಬಯಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಆರೋಪಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಮಫ್ಲರ್, ದುಪಟ್ಟಾ ಮತ್ತು ಕೊಲೆಗೆ ಬಳಸಲಾದ ಮೊಬೈಲ್ ಫೋನ್ ಸೇರಿದಂತೆ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.




