ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳ ವೇಳೆ ಸಾಮೂಹಿಕ ನಕಲು ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಶಾಲಾ ಶಿಕ್ಷಣ ಮಂಡಳಿಯು ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಅಮಾನತುಗೊಳಿಸಿದ್ದು, ಇಡೀ ಪರೀಕ್ಷಾ ಕೇಂದ್ರವನ್ನೇ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳಾಂತರಿಸಲು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರಾ ಜಿಲ್ಲೆಯ ಜವಾಲಿಯಲ್ಲಿರುವ ‘ಪಿಎಂ ಶ್ರೀ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ’ಯಲ್ಲಿ ಈ ಘಟನೆ ನಡೆದಿದೆ. ಪರೀಕ್ಷಾ ಕೊಠಡಿಯೊಳಗೆ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಕ್ಷ್ಯ ಲಭ್ಯವಾದ ಬೆನ್ನಲ್ಲೇ ಮಂಡಳಿಯು ಈ ಕಠಿಣ ಕ್ರಮ ಕೈಗೊಂಡಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಶಾಲಾ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಜೇಶ್ ಶರ್ಮಾ, “ಜವಾಲಿ ಕೇಂದ್ರದಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ನಡೆಯುತ್ತಿವೆ ಎಂಬ ಅನೇಕ ದೂರುಗಳು ಮತ್ತು ವಿಡಿಯೋ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರವನ್ನು ಮಟ್ಲಾಹರ್‌ನ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ನಿರ್ದೇಶಕರು, ಜೀವಶಾಸ್ತ್ರ ಉಪನ್ಯಾಸಕರೂ ಆಗಿರುವ ಕೇಂದ್ರದ ಅಧೀಕ್ಷಕ ರವಿ ಭಂಡಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. “ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಪ್ರಾಮಾಣಿಕತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಸರ್ಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ” ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಪ್ರಾಥಮಿಕ ತನಿಖೆಯ ಪ್ರಕಾರ, ಪರೀಕ್ಷಾ ಕೊಠಡಿಯಲ್ಲಿದ್ದ ಶಿಕ್ಷಕರೊಬ್ಬರು ಬಹು ಆಯ್ಕೆಯ ಪ್ರಶ್ನೆಗಳಿಗೆ (ಎಂಸಿಕ್ಯೂ) ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಿರುವುದು ಪತ್ತೆಯಾಗಿದೆ. ಇದೊಂದು ಸ್ಪಷ್ಟವಾದ ಸಾಮೂಹಿಕ ನಕಲು ಪ್ರಕರಣವಾಗಿದ್ದು, ಇದು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ಮಂಡಳಿ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ವಿಸ್ತೃತ ತನಿಖೆ ನಡೆಸಿ ಮಂಡಳಿಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವಂತೆ ಜವಾಲಿಯ ಉಪ-ವಿಭಾಗಾಧಿಕಾರಿ (ಎಸ್‌ಡಿಎಂ) ಕಚೇರಿಗೆ ಮಂಡಳಿ ನಿರ್ದೇಶನ ನೀಡಿದೆ. ಇಂತಹ ಘಟನೆಗಳು ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವ ದೃಷ್ಟಿಯಿಂದ ಜವಾಲಿ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಲಾಗಿದೆ. ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ಇನ್ನುಳಿದ ಪರೀಕ್ಷೆಗಳನ್ನು ಮಟ್ಲಾಹರ್ ಶಾಲೆಯಲ್ಲಿ ಬರೆಯಲಿದ್ದಾರೆ.
ಕೇಂದ್ರದ ಸಂಯೋಜಕರು, ಅಧೀಕ್ಷಕರು ಮತ್ತು ಉಪ-ಅಧೀಕ್ಷಕರ ವಿರುದ್ಧ ಇಲಾಖಾ ತನಿಖೆ ಆರಂಭಿಸಲಾಗಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿ ಶಿಮ್ಲಾದಲ್ಲಿರುವ ಹಿಮಾಚಲ ಪ್ರದೇಶ ಶಿಕ್ಷಣ ಇಲಾಖೆಗೂ ಮಂಡಳಿ ಪತ್ರ ಬರೆದಿದೆ.
ಅಕ್ರಮಗಳ ವಿರುದ್ಧ ಮಂಡಳಿಯು ಕಠಿಣ ನೀತಿಯನ್ನು ಹೊಂದಿದ್ದು, ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಲು ಬದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಕ್ರಮಕ್ಕೆ ಸಹಕರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧ್ಯಕ್ಷ ಶರ್ಮಾ ಎಚ್ಚರಿಸಿದ್ದಾರೆ.





