ಭೋಪಾಲ್-ವಿದಿಶಾ ಹೆದ್ದಾರಿಯು (ರಾಜ್ಯ ಹೆದ್ದಾರಿ 18) ಭೀಕರವಾಗಿ ಕುಸಿದಿರುವ ಘಟನೆ ಮಧ್ಯಪ್ರದೇಶದ ಸುಖಿ ಸವಾನಿಯಾದಲ್ಲಿ ನಡೆದಿದೆ. ಹೆದ್ದಾರಿಯು ಭೋಪಾಲ್ ಪೂರ್ವ ಬೈಪಾಸ್‌ನ ಸುಮಾರು 50 ಮೀಟರ್ (164 ಅಡಿ) ಉದ್ದದ ರಸ್ತೆಯು ಇದ್ದಕ್ಕಿದ್ದಂತೆ ಕುಸಿದಿದೆ. ಕುಸಿತದಿಂದ 20 ಅಡಿ (6 ಮೀಟರ್) ಆಳದ ಗುಂಡಿ ನಿರ್ಮಾಣವಾಗಿದೆ. ರಸ್ತೆ ಕುಸಿತದಿಂದ ಚಾಲಕರು ರಸ್ತೆಯಲ್ಲಿ ಆತಂಕದಿಂದಲೇ ವಾಹನ ಚಲಾಯಿಸುವಂತಾಗಿದೆ.
ಅದೃಷ್ಟವಶಾತ್, ರಸ್ತೆ ಕುಸಿದು ಬಿದ್ದಾಗ, ಸ್ಥಳದಲ್ಲಿ ಯಾವುದೇ ವಾಹನಗಳು-ಜನರು ಇರಲಿಲ್ಲ. ಹೀಗಾಗಿ, ಯಾವುದೇ ಸಾವು-ನೋವು, ಹಾನಿ ಸಂಭವಿಸಿಲ್ಲ. ಒಂದು ವೇಳೆ, ಸಂಚಾರ ದಟ್ಟಣೆ ಇದ್ದಿದ್ದರೆ ಭೀಕರ ಅವಘಡ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು ಗಂಟೆಗಳೇ ಕಳೆದರೂ, ಆಡಳಿತಾತ್ಮಕ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಇಷ್ಟು ದೊಡ್ಡ ಅಪಘಾತದ ಹೊರತಾಗಿಯೂ, ಗಂಟೆಗಳ ಕಾಲ ಸ್ಥಳಕ್ಕೆ ಯಾವುದೇ ಅಧಿಕಾರಿಯಾಗಲೀ ಬಂದಿರಲಿಲ್ಲ, ಸುರಕ್ಷತಾ ವ್ಯವಸ್ಥೆಗಳನ್ನಾಗಲೀ ಮಾಡಿರಲಿಲ್ಲ. ಬ್ಯಾರಿಕೇಡ್‌ಗಳನ್ನೂ ಹಾಕಿರಲಿಲ್ಲ ಎಂದು ಆರೋಪಿಸಲಾಗಿದೆ.
ಹೆಚ್ಚು ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಪರಿಸ್ಥಿತಿ ನಿರ್ವಹಣೆಗೆ ಒಬ್ಬರೇ ಒಬ್ಬ ಪೊಲೀಸ್ ಮಾತ್ರವೇ ಇದ್ದರು. ಗಂಟೆಗಳ ಬಳಿಕ, ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದರು. ಬಳಿಕ, ಬ್ಯಾರಿಕೇಡ್‌ಗಳನ್ನು ಅಳವಡಿಸಿದರು ಎಂದು ವರದಿಯಾಗಿದೆ.
Road built using space technology: PM Modi
— زماں (@Delhiite_) October 13, 2025
📍 Bhopal-Vidisha NH-46, near Gupta bypass. pic.twitter.com/Kr2f75OGSJ
ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಸಂಬಂಧಿತ ಇಲಾಖೆಗಳು ರಸ್ತೆ ದುರಸ್ತಿ ಮಾಡಲು ಮತ್ತು ಪರಿಶೀಲಿಸಲು ನಿರ್ಲಕ್ಷಿಸಿದ್ದರಿಂದ ಪದೇ-ಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಮರುನಿರ್ಮಾಣ ಮಾಡಬೇಕು. ರಸ್ತೆ ಕುಸಿತಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
2013ರಲ್ಲಿ ‘ಮೆಸರ್ಸ್ ಟ್ರಾನ್ಸ್‌ಟ್ರಾಯ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಬಿಒಟಿ ಮಾದರಿಯಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿತ್ತು. ಒಪ್ಪಂದದ ನಿಯಮಗಳನ್ನು ಪಾಲಿಸದ ಕಾರಣ ಕಂಪನಿಯ ಒಪ್ಪಂದವನ್ನು 2020ರಲ್ಲಿ ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಲು ಸರ್ಕಾರವು ಎಂಪಿಆರ್‌ಡಿಸಿ ಮುಖ್ಯ ಎಂಜಿನಿಯರ್ ಬಿಎಸ್ ಮೀನಾ, ಜಿಎಂ ಮನೋಜ್ ಗುಪ್ತಾ ಮತ್ತು ಜಿಎಂ ಆರ್‌ಎಸ್ ಚಾಂಡೆಲ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದೆ. ವರದಿಯ ಆಧಾರದ ಮೇಲೆ, ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಮಧ್ಯಪ್ರದೇಶ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.




