ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಮಾತ್ರ ಹೆಚ್ಚು ಅನುದಾನ ನೀಡಿ ಉಳಿದ ರಾಜ್ಯಗಳ ಬಗ್ಗೆ ತಾರತಮ್ಯವೆಸಗಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ ಬಗ್ಗೆ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ. ಮೋದಿ ಸರ್ಕಾರದ ಬಜೆಟ್‌ನಲ್ಲಿ ಯಾವ ರಾಜ್ಯವು ಏನನ್ನು ಪಡೆದುಕೊಂಡಿಲ್ಲ. ಬಿಜೆಪಿಯನ್ನು ನಿರಾಕರಿಸಿದ ರಾಜ್ಯಗಳು ಈ ಬಜೆಟ್‌ನಲ್ಲಿ ಏನನ್ನು ಪಡೆದುಕೊಂಡಿಲ್ಲ. ಎಲ್ಲರ ತಟ್ಟೆ ಖಾಲಿಯಿದೆ. ಕೇವಲ ಎರಡು ರಾಜ್ಯಗಳ ತಟ್ಟೆಗಳಲ್ಲಿ ಮಾತ್ರ ಪಕೋಡ ಮತ್ತು ಜಿಲೇಬಿ ನೀಡಲಾಗಿದೆ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಕ್ರಿಯೆ ನೀಡಲು ಅನುಮತಿಸಬೇಕೆಂದು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರು ಖರ್ಗೆ ಅವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, “ನಾನು ಮಾತನಾಡಿ ಮುಗಿಸುವುದಕ್ಕೆ ಬಿಡಿ. ಮಾತಾಜಿ ಅವರು ಮಾತನಾಡುವುದರಲ್ಲಿ ನಿಪುಣರು. ನನಗೆ ಈ ಬಗ್ಗೆ ತಿಳಿದಿದೆ” ಎಂದು ನಿರ್ಮಲಾ ಸೀತಾರಾಮನ್ ಅವರ ಕಾಲೆಳೆದರು.
ತಮಿಳುನಾಡಿಗಾಗಲೀ, ಕೇರಳವಾಗಲೀ, ಕರ್ನಾಟಕಕ್ಕಾಗಲೀ, ಮಹಾರಾಷ್ಟ್ರಕ್ಕಾಗಲೀ, ಪಂಜಾಬಾಗಲೀ, ಹರಿಯಾಣಕ್ಕಾಗಲಿ ಏನೂ ಸಿಕ್ಕಿಲ್ಲ. ದೆಹಲಿ ಮತ್ತು ಒಡಿಶಾಕ್ಕೂ ಏನನ್ನೂ ನೀಡಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಮೈತ್ರಿಕೂಟದ ಎಲ್ಲ ಪಕ್ಷಗಳು ಈ ಬಜೆಟ್ ಅನ್ನು ಖಂಡಿಸಿ ಪ್ರತಿಭಟಿಸಲಿವೆ ಎಂದು ಖರ್ಗೆ ಕೇಂದ್ರದ ತಾರತಮ್ಯ ನೀತಿಯ ಬಗ್ಗೆ ಖಂಡಿಸಿದರು.
ಮೋದಿ ಸರ್ಕಾರ ಇದೇ ರೀತಿ ತಾರತಮ್ಯವೆಸಗಿದರೆ ಏನನ್ನು ಸಾಧಿಸಲಾಗುವುದಿಲ್ಲ. ಇದು ಅಭಿವೃದ್ಧಿ ಹೇಗಾಗುತ್ತದೆ? ಇಂದು ನಿಮ್ಮ ಜೊತೆ ಇರುವವರು ನಾಳೆ ಬೇರೆಯವರ ಜೊತೆ ಇರುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಖರ್ಗೆ ಎಚ್ಚರಿಸಿದರು.





