2027ರ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅತೀ ಹೆಚ್ಚು ಶಾಸಕರು ಮತ್ತು ಸಂಸದರನ್ನು ಹೊಂದಿರುವ ರಾಜ್ಯದಲ್ಲಿ ತನ್ನ ನೆಲೆಯನ್ನು ಮರಳಿ ಪಡೆಯಲು ಕಾಂಗ್ರೆಸ್ ಈಗಾಗಲೇ ಸಿದ್ದತೆಗಳನ್ನು ಆರಂಭಿಸಿದೆ. ಬಹುಜನ ಸಮಾಜ ಪಕ್ಷದ (BSP) ಸಂಸ್ಥಾಪಕ ಕಾನ್ಶಿ ರಾಮ್ ಅವರ ಪರಂಪರೆಯ ಮೇಲೆ ಕಾಂಗ್ರೆಸ್ ಹಕ್ಕು ಸಾಧಿಸಲು ಮುಂದಾಗಿದ್ದು, ಕಾನ್ಶಿ ರಾಮ್ ಅವರ ಜನ್ಮದಿನವನ್ನು ‘ಸಾಮಾಜಿಕ ಪರಿವರ್ತನ ದಿವಸ’ವೆಂದು ಆಚರಿಸಿದೆ.
ಲಕ್ನೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. “ಕಾಂಗ್ರೆಸ್ ತನ್ನ ಕೆಲಸವನ್ನು ಸರಿಯಾಗಿ ಮಾಡಿದ್ದರೆ, ಕಾನ್ಶಿ ರಾಮ್ ಯಶಸ್ವಿಯಾಗುತ್ತಿರಲಿಲ್ಲ. ಜವಾಹರಲಾಲ್ ನೆಹರೂ ಅವರು ಬದುಕಿದ್ದರೆ, ಕಾನ್ಶಿ ರಾಮ್ ಅವರು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಯಾಗುತ್ತಿದ್ದರು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾಜಿಕ ಪರಿವರ್ತನ ದಿವಸ ಕಾರ್ಯಕ್ರಮ ಮತ್ತು ರಾಹುಲ್ ಗಾಂಧಿ ಅವರ ಮಾತುಗಳು ಉತ್ತರ ಪ್ರದೇಶದಲ್ಲಿ ಬಹುಜನರ ಪರವಾಗಿ ಕಾಂಗ್ರೆಸ್ ದೃಢ ನಿಂತಿದೆ ಎಂಬ ಸಂದೇಶವನ್ನು ರವಾನಿಸಿದೆ. ಇದೇ ಸಮಯದಲ್ಲಿ, “ಮಾಯಾವತಿ ಅವರು ಬಹುಜನರ ಪರವಾಗಿ ಹೋರಾಟ ಮಾಡುತ್ತಿಲ್ಲ. ಅವರ ಹಿಂದೆಸರಿಯುವಿಕೆಯಿಂದ ಉಂಟಾದ ಕೊರತೆಯನ್ನು ರಾಹುಲ್ ಗಾಂಧಿ ತುಂಬಿದ್ದಾರೆ. ಬಹುಜನರ ಪರವಾಗಿ ರಾಹುಲ್ ಗಾಂಧಿ ಹೋರಾಟವನ್ನು ಮುನ್ನಡೆಸುತ್ತಾರೆ” ಎಂದು ಕಾಂಗ್ರೆಸ್‌ನ ಎಸ್‌ಸಿ ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ರೈತರು, ಕಾರ್ಮಿಕರು, ದಲಿತರು, ಹಿಂದುಳಿದವರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಸಮಾಜದ ವಿವಿಧ ಸ್ತರದ ಜನರನ್ನು ಭೇಟಿಯಾಗಿದ್ದರು. ಆಗ, ಈ ವರ್ಗಗಳು ವ್ಯಾಪಾರ/ವ್ಯವಹಾರ, ನೈಸರ್ಗಿಕ ಸಂಪನ್ಮೂಲಗಳು, ಉನ್ನತ ನ್ಯಾಯಾಂಗ ಹಾಗೂ ಉನ್ನತ ಅಧಿಕಾರಶಾಹಿಯಲ್ಲಿ ಬಹಳ ಹಿಂದಿವೆ ಎಂಬುದು ಅವರಿಗೆ ಅರಿವಾಯಿತು. ಭೂಮಿ, ವ್ಯಾಪಾರ ಮತ್ತು ಉದ್ಯೋಗಗಳ ಕೊರತೆ ಇದ್ದ ಬಹುಜನ ಸಮಾಜವನ್ನು ಕಾನ್ಶಿ ರಾಮ್ ಹೇಗೆ ಒಗ್ಗೂಡಿಸಿದರು ಮತ್ತು ಸರ್ಕಾರದಲ್ಲಿ ಪಾಲ್ಗೊಳ್ಳುವಿಕೆ ಇರಬೇಕು, ಅಧಿಕಾರದಲ್ಲಿ ಪಾಲು ಇರಬೇಕು ಎಂಬ ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿದರು ಎಂಬುದರ ಕುರಿತು ರಾಹುಲ್ ಅಧ್ಯಯನ ಮಾಡಿದರು” ಎಂದು ಅವರು ವಿವರಿಸಿದ್ದಾರೆ.
“ಕಾನ್ಶಿ ರಾಮ್ ಅವರು ಬಹುಜನರನ್ನು ಒಗ್ಗೂಡಿಸಲು ಬೈಸಿಕಲ್ ಓಡಿಸಿದರು, ಪಾದಯಾತ್ರೆ ಮಾಡಿದರು, ಬಡವರಲ್ಲಿ ಆತ್ಮವಿಶ್ವಾಸ ಮೂಡಿಸಿದರು ಹಾಗೂ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಆ ಪಕ್ಷ ಈಗ ಏಕೆ ದಾರಿ ತಪ್ಪಿತು? ಆ ವರ್ಗದ ಪರವಾಗಿ ಮಾತನಾಡುವವರು ಯಾರೂ ಇಲ್ಲ. ಇದನ್ನು ರಾಹುಲ್ ಗಾಂಧಿ ಅರಿತುಕೊಂಡರು. ಬಳಿಕ, ಅಂಬೇಡ್ಕರ್ ಮತ್ತು ಕಾನ್ಶಿ ರಾಮ್ ಕುರಿತು ಹೆಚ್ಚು ಓದಿದರು. ಸಾಮಾಜಿಕ ನ್ಯಾಯದ ಮಹತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದಕ್ಕಾಗಿ ಹೋರಾಡಲು ನಿರ್ಧರಿಸಿದರು. ಅವರು ಸಾಮಾಜಿಕ ನ್ಯಾಯವನ್ನು ಒಂದು ಮಿಷನ್ ಆಗಿ ಮಾಡಿಕೊಂಡಿದ್ದಾರೆ ಮತ್ತು ಅದಕ್ಕಾಗಿ ಹೋರಾಡಲು ಪ್ರತಿಜ್ಞೆ ಮಾಡಿದ್ದಾರೆ” ಎಂದು ಗೌತಮ್ ಹೇಳಿದ್ದಾರೆ.
“ಕಾಂಗ್ರೆಸ್ ಯಾವಾಗಲೂ ಎಲ್ಲರನ್ನು ಒಳಗೊಳ್ಳುವ ಪಕ್ಷವಾಗಿದೆ… ರಾಹುಲ್ ಗಾಂಧಿ ಸಾಮಾಜಿಕ ನ್ಯಾಯದ ಹೋರಾಟವನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ, ನಾವು ಕಾನ್ಶಿ ರಾಮ್ ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದೇವೆ. ನಾವು ರಾಜಕೀಯಕ್ಕಾಗಿ ಅಲ್ಲ, ಅವರ ಆಲೋಚನೆಗಳನ್ನು ದೇಶಕ್ಕೆ ತಿಳಿಸಲು ಇಂತಹ ಮಹಾನ್ ವ್ಯಕ್ತಿಗಳ ಜನ್ಮದಿನಗಳನ್ನು ಆಚರಿಸುತ್ತೇವೆ” ಎಂದಿದ್ದಾರೆ.
“ನಾವು ಎಸ್‌ಸಿ ವಿಭಾಗ ಸೇರಿದಂತೆ ಸಂಪೂರ್ಣ ಸಂಘಟನೆಯನ್ನು ಪುನರ್ನಿರ್ಮಿಸುತ್ತಿದ್ದೇವೆ. ನಾವು ಹಳ್ಳಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಸಂವಿಧಾನ, ಸಾಮಾಜಿಕ ನ್ಯಾಯ, ದಲಿತ ಸಮಾಜದ ದಶೆ ಮತ್ತು ದಿಕ್ಕಿನ ಬಗ್ಗೆ ಚರ್ಚಿಸುತ್ತೇವೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
“ಕಾಂಗ್ರೆಸ್ ಅನ್ನು ಸಾಮಾನ್ಯ ಜನರ ಪಕ್ಷವಾಗಿ ಮರಳಿ ತರುವುದು ನಮ್ಮ ಪ್ರಯತ್ನ. ವಂಚಿತ ವರ್ಗಗಳು ಹಿಂದೆ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದವು. ಆದರೆ, ನಂತರ ಅವರು ದೂರ ಸರಿದರು. ಈಗ ಮತ್ತೆ ಪರ್ಯಾಯವನ್ನು ಹುಡುಕುತ್ತಿದ್ದಾರೆ. ನಮ್ಮ ಮೂಲ ಮತದಾರರು ಏಕೆ ದೂರ ಸರಿದರು, ನಾವು ಮಾಡಿದ ತಪ್ಪುಗಳೇನು ಹಾಗೂ ನಾವು ಅವುಗಳನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಕಾಂಗ್ರೆಸ್ ವಿಶ್ಲೇಷಿಸುತ್ತಿದೆ” ಎಂದು ತಿಳಿಸಿದ್ದಾರೆ.
“ಕಾನ್ಶಿ ರಾಮ್ ಸಾಹೇಬ್ ಒಂದು ವಿಚಾರಧಾರೆ. ಅವರು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲದ ಮಹಾನ್ ವ್ಯಕ್ತಿಗಳ ವರ್ಗಕ್ಕೆ ಸೇರಿದವರು. ಅವರು ಇಡೀ ದೇಶದ ಪರಂಪರೆ. ಮಾಯಾವತಿ ಅವರು ಏನು ಬೇಕಾದರೂ ಹೇಳಬಹುದು. ನಾವು ಅವರನ್ನು ಗೌರವಿಸುತ್ತೇವೆ. ಅವರು ‘ಐರನ್ ಲೇಡಿ’. ಆದರೆ ಅವರು ಬಹುಜನರಿಗಾಗಿ ಹೋರಾಟ ನಡೆಸುತ್ತಿದ್ದರೆ, ಯಾರೂ ಆ ಜಾಗವನ್ನು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಅವರು ಆ ಹೋರಾಟವನ್ನು ಬಿಟ್ಟುಬಿಟ್ಟಿರುವುದರಿಂದ, ರಾಹುಲ್ ಗಾಂಧಿ ದೇಶದಾದ್ಯಂತ ಆ ಹೋರಾಟವನ್ನು ನಡೆಸುತ್ತಿದ್ದಾರೆ. ಇಂದು ರಾಹುಲ್ ಗಾಂಧಿ ಅವರು ಕಾನ್ಶಿ ರಾಮ್ ಅವರ ಬಹುಜನ ಸಿದ್ಧಾಂತವನ್ನು, ಅವರ ಕೆಲಸಗಳನ್ನು ಹಾಗೂ ಸಾಮಾಜಿಕ ಬದಲಾವಣೆಯ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ” ಎಂದು ಗೌತಮ್ ಹೇಳಿದ್ದಾರೆ.




