ವೈದ್ಯಕೀಯ ಕಾಲೇಜು ಆಸ್ಪತ್ರೆ ಆವರಣದಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯ ವಿರೂಪಗೊಂಡ ಮೃತದೇಹ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಲ್ಯಾಣಿಯಲ್ಲಿರುವ ಜೆಎನ್‌ಎಂ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಪುಲಕ್ ಹಾಲ್ಡರ್ ಅವರ ಮೃತದೇಹವು ಹಾಸ್ಟೆಲ್‌ನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರದಿಂದಲೂ ಆತ ಕಾಲೇಜು ಮತ್ತು ಕ್ಯಾಂಟೀನ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ಗುರುವಾರ, ಆತನ ಕೊಠಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಇತರ ವಿದ್ಯಾರ್ಥಿಗಳು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು, ಬಾಗಿಲನ್ನು ಹೊಡೆದು, ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆದಿದ್ದಾರೆ.
ಪುಲಕ್ ತನ್ನ ಕೊಠಡಿಯಲ್ಲಿ ಒಬ್ಬಂಟಿಯಾಗಿಯೇ ಇರುತ್ತಿದ್ದರು. ಮಾರ್ಚ್ 5ರಿಂದ ಆರಂಭವಾಗಲಿರುವ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸ್ ಶವಾಗಾರಕ್ಕೆ ಕಳುಹಿಸಲಾಗಿದೆ. ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೇ, ಫೆಬ್ರವರಿ 15 ರಂದು ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಾಸ್ಟೆಲ್‌ನ ಸ್ನಾನಗೃಹದ ಸೀಲಿಂಗ್‌ಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.




