2023ರಿಂದ ಜನಾಂಗೀಯ ಹಿಂಸಾಚಾರಕ್ಕೆ ಒಳಗಾಗಿರುವ ಮಣಿಪುರದಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಚುರಾಚಂದ್‌ಪುರ ಜಿಲ್ಲೆಯಲ್ಲಿ ಮೈತೇಯಿ ಸಮುದಾಯದ ವ್ಯಕ್ತಿಯನ್ನು ಅಪಹರಿಸಿ ಬಳಿಕ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕುಕಿ ಸಮುದಾಯದ ಸಂಘಟನೆಗಳೇ ಈ ಕೃತ್ಯವನ್ನು ಮಾಡಿರುವುದು ಎಂದು ಮೈತೇಯಿ ಸಮುದಾಯ ಆರೋಪಿಸಿದೆ. ಇದರಿಂದಾಗಿ ಪರಿಸ್ಥಿತಿ ಮತ್ತೆ ಹದಗೆಟ್ಟಿದ್ದು, ಶಾಂತಿ ಪ್ರಯತ್ನಕ್ಕೆ ಧಕ್ಕೆ ಉಂಟಾಗಿದೆ.
2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆದಿದ್ದು 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಇಂದಿಗೂ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕಳೆದ ವರ್ಷ ಫೆಬ್ರವರಿ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದು, ಸದ್ಯ ಮತ್ತೆ ರಾಜ್ಯ ಸರ್ಕಾರ ರಚನೆಯ ಬಗ್ಗೆ ಊಹಾಪೋಹಗಳಿವೆ. ಈ ನಡುವೆಯೇ ಮತ್ತೆ ಕೊಲೆ ನಡೆದಿದೆ.
ಇದನ್ನು ಓದಿದ್ದೀರಾ? ಮೋದಿ ಮಣಿಪುರ ಭೇಟಿಗಿಂತ ವೋಟ್ ಚೋರಿ ಮುಖ್ಯ ಸಮಸ್ಯೆ: ರಾಹುಲ್ ಗಾಂಧಿ
ಮೈತೇಯಿ ಸಮುದಾಯಕ್ಕೆ ಸೇರಿದ ಮೃತ ಮಾಯಾಂಗಲಂಬಮ್ ರಿಷಿಕಾಂತ ಸಿಂಗ್ ಮತ್ತು ಕುಕಿ ಸಮುದಾಯಕ್ಕೆ ಸೇರಿದ ಅವರ ಪತ್ನಿ ಚಿಂಗ್ನು ಹಾವೋಕಿಪ್ ಅವರನ್ನು ಬುಧವಾರ ಚುರಾಚಂದ್‌ಪುರ ಜಿಲ್ಲೆಯ ತುಯಿಬಾಂಗ್ ಪ್ರದೇಶದಲ್ಲಿರುವ ಅವರ ಮನೆಯಿಂದ ಅಪಹರಿಸಲಾಗಿದೆ. ನಂತರ ರಿಷಿಕಾಂತ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಮಹಿಳೆಯನ್ನು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ನೆಲದ ಮೇಲೆ ಕುಳಿತು ಎದುರಿರುವ ವ್ಯಕ್ತಿಗೆ ಬೇಡಿಕೊಳ್ಳುವುದು ಕಾಣುತ್ತದೆ. ನಂತರ ಗುಂಡು ಹಾರಿಸಲಾಗಿದ್ದು ಸಿಂಗ್ ನೆಲದ ಮೇಲೆ ಬಿದ್ದಿದ್ದಾರೆ. ಆದರೆ ವಿಡಿಯೋದಲ್ಲಿ ಆರೋಪಿಗಳು ಕಂಡುಬಂದಿಲ್ಲ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





