ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜೈವಿಕವಾಗಿ ಕೊಳೆಯುವ ಮುಟ್ಟಿನ ನೈರ್ಮಲ್ಯ ಪ್ಯಾಡ್‌ಗಳನ್ನು (ಸ್ಯಾನಿಟರಿ ಪ್ಯಾಡ್) ಉಚಿತವಾಗಿ ನೀಡಬೇಕು. ಶಾಲೆಗಳು ಸ್ಯಾನಿಟರಿ ಪ್ಯಾರ್‌ಗಳನ್ನು ಒದಗಿಸುತ್ತಿವೆಯೇ ಎಂಬುದನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಳಿತ ಪ್ರದೇಶಗಳು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜೀವನದ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
6 ರಿಂದ 12ನೇ ತರಗತಿಯವರೆಗಿನ ಬಾಲಕಿಯರಿಗಾಗಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ‘ಶಾಲಾ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ ನೀತಿ’ಯನ್ನು ದೇಶಾದ್ಯಂತ ಜಾರಿಗೆ ತರಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ವಿಚಾರಣೆ ನಡೆಸಿದೆ.
“ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬದುಕುವ ಹಕ್ಕಿನ ಭಾಗವಾಗಿದೆ. ಶಾಲೆಗಳು ಈ ಸೌಲಭ್ಯಗಳನ್ನು ಒದಗಿಸಲು ವಿಫಲವಾದರೆ, ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಹೇಳಿದೆ.
“ಸರ್ಕಾರಿ ಸ್ವಾಮ್ಯದ ಅಥವಾ ಖಾಸಗಿ ವಲಯಕ್ಕೆ ಸೇರಿವೆ ಎಂಬುದನ್ನು ಲೆಕ್ಕಿಸದೆ ಎಲ್ಲ ಶಾಲೆಗಳಲ್ಲಿ ಬಾಲಕಿ ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಬೇಕು. ಅವು ಅಂಗವಿಕಲ ಸ್ನೇಹಿಯೂ ಆಗಿಬೇಕು” ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.




